ಸಿನಿಮಾ, ಮನೋರಂಜನಾ ಕಾರ್ಯಕ್ರಮ, ರಿಯಾಲಿಟಿ ಶೋಗಳು ಆಪ್ನಲ್ಲಿ ತುಂಬಿ ತುಳುಕುತ್ತಿರುತ್ತವೆ. ಆದರೆ, ಇಲ್ಲೋಬ್ಬ ಕ್ರಿಯೇಟೀವ್ ನಿರ್ದೇಶಕ, ಅತ್ಯುತ್ತಮ ಬರಹಗಾರ ತಾನು ಮಾಡಿದ ಸಿನಿಮಾ ವೀಕ್ಷಣೆಗೆ ತನ್ನದೇ ಆದ ಹೊಸ ಆಪ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಲಾಕ್ಡೌನ್ ಮುಗಿದ ಮೇಲೆ ಗುರುಪ್ರಸಾದ್ ಹೊಸ ಯೋಜನೆ ವರ್ಕ್ ಆಗುತ್ತಾ..? ಮಾತಿನಮಲ್ಲ ಗುರುಪ್ರಸಾದ್ ಕಟ್ಟುನಿಟ್ಟಾಗಿ ಕೆಲಸ ಮಾಡಿದರೆ ವರ್ಷಕ್ಕೆ ಎರಡು ಸಿನಿಮಾ ಮಾಡಬಹುದು ಎಂದು ಉದ್ಯಮ ಹೇಳುತ್ತದೆ. ಇವರು ಪ್ರಾರಂಭ ಮಾಡಿದ ಒಂದಿಷ್ಟು ಸಿನಿಮಾ ಇನ್ನೂ ಅರ್ಧಂಬರ್ಧ ಆಗಿ ಉಳಿದಿವೆ. ಅನೂಪ್ ಸಾರಾ ಗೋವಿಂದ್ ಅಭಿನಯದ ಇವರ ಸಿನಿಮಾ ‘ಅದೇಮಾ’ ಕಂಠೀರವ ಸ್ಟುಡಿಯೋದಲ್ಲಿ ಏಪ್ರಿಲ್ 26, 2017 ಪ್ರಾರಂಭವಾಯಿತು. ಆಮೇಲೆ ಚಿತ್ರದ ಬಹುತೇಕ ಭಾಗ ಸ್ಮಶಾನದಲ್ಲೇ ಚಿತ್ರೀಕರಣ ಮಾಡಲಾಯಿತು. ಆನಂತರ ಗುರುಪ್ರಸಾದ್ ಆ ಸಿನಿಮಾ ಬಗ್ಗೆಯೇ ಮಾತನಾಡಲಿಲ್ಲ. ಆದೇಮಾ ಈ ಏಪ್ರಿಲ್ ತಿಂಗಳಿಗೆ ಸೆಟ್ಟೇರಿ ಮೂರು ವರ್ಷ ಆಗ್ತಾ ಬಂತು. ಈ ಚಿತ್ರವನ್ನೂ 2017 ವಿಜಯದಶಮಿ ಹಬ್ಬಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ಗುರುಪ್ರಸಾದ್ ಮಾತು ಕೊಟ್ಟಿದ್ದರು. ಆದರೆ, ಮೂರು ವಿಜಯದಶಮಿ ಬಂದು ಹೋದರು ಸಿನಿಮಾ ಬರಲೇ ಇಲ್ಲ.
ಇನ್ನೂ, ಈಗ ಗುರುಪ್ರಸಾದ್ ಕೊರೊನಾ ಮಹಾಮಾರಿಯ ಬಗ್ಗೆ ಹೊಸ ಚಿತ್ರ ಮಾಡಲು ಲಾಕ್ ಡೌನ್ ಸ್ಥಿತಿಯಲ್ಲಿ ಕಥೆ ಸಿದ್ದ ಮಾಡಿಕೊಡಿದ್ದಾರೆ. ಆದರೆ, ಲಾಕ್ ಡೌನ್ ಮುಗಿದ ನಂತರ ಅವರು ಪ್ರಾರಂಭ ಮಾಡಲಿರುವ ಈ ಸಿನಿಮಾದ ಬಿಡುಗಡೆ ಚಿತ್ರಮಂದಿರದಲ್ಲಿ ಆಗುವುದಿಲ್ಲಂತೆ ಬದಲಿಗೆ ಸಿನಿಮಾ ವೀಕ್ಷಣೆಗೆ ಒಂದು ಆ್ಯಪ್ ಬಿಡುಗಡೆ ಮಾಡ್ತಾರಂತೆ. ಸಿನಿಮಾ ನೋಡುವವರು ಈ ಆಪ್ ಮೂಲಕವೇ 100 ರೂಪಾಯಿ ಪಾವತಿಸಿ ಸಿನಿಮಾ ನೋಡಬೇಕು ಎಂಬುದು ಗುರುಪ್ರಸಾದ್ ಹಾಕಿಕೊಂಡಿರುವ ಯೋಜನೆ.
ಪ್ರಸ್ತುತ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಗುರುಪ್ರಸಾದ್ ರಂತಹ ನಿರ್ದೇಶಕರಿಗೆ ಒಳ್ಳೆಯ ಬೇಡಿಕೆ ಇದೆ. ವಾಹಿನಿಗಳು ಕೂಡ ಗುರುಪ್ರಸಾದ್ ಕೆಲಸಗಳಿಗೆ ಒಳ್ಳೆಯ ಬೆಲೆ ಕಟ್ಟಿ ಸಿನಿಮಾ ಕೊಳ್ಳುತ್ತಾರೆ. ಚಿತ್ರಮಂದಿರಗಳಲ್ಲಿ ಸಹ ಗುರುಪ್ರಸಾದ್ ಸಿನಿಮಾ ಆದ ಮೇಲೆ ಒಂದು ಮಟ್ಟಿಗೆ ಪ್ರೇಕ್ಷಕ ಮುಗಿಬೀಳುತ್ತಾನೆ. ಇಷ್ಟೆಲ್ಲ ಲಾಭಗಳನ್ನು ಇಟ್ಟುಕೊಂಡು ಆ್ಯಪ್ ಮೂಲಕ ಸಿನಿಮಾ ತೋರಿಸುವ ಯೋಜನೆ ಎಷ್ಟು ಫಲಕಾರಿ ಆಗಲಿದೆ ಎಂಬುದರ ಬಗ್ಗೆ ಸ್ವತಃ ಅದು ಕಾರ್ಯಗತ ಆದ ಮೇಲೆ ತಿಳಿಯುತ್ತದೆ.