ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ 'ರಂಗನಾಯಕಿ' ಚಿತ್ರ ಚಂದನವನದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ಸ್ಯಾಂಡಲ್ವುಡ್ನಲ್ಲಿ 'ರಂಗನಾಯಕಿ' ಶೀರ್ಷಿಕೆಯನ್ನೇ ಮರುಬಳಕೆ ಮಾಡಿಕೊಂಡು, ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಸಿನಿಮಾ ಮಾಡಿದ್ದಾರೆ.
ನನ್ನ ಸಿನಿಮಾಗೆ ಯು ಸರ್ಟಿಫಿಕೇಟ್ ಸಿಗೋದು ಗ್ಯಾರಂಟಿ: ನಿರ್ದೇಶಕ ದಯಾಳ್ ಪದ್ಮನಾಭನ್
1981ರಲ್ಲಿ ಬಿಡುಗಡೆಯಾದ ಆರತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ರಂಗನಾಯಕಿ' ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಅದೇ ಹೆಸರಿನಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ವಾಲ್ಯೂಮ್ 1 ವರ್ಜಿನಿಟಿ' ಅಂತಾ ಟ್ಯಾಗ್ಲೈನ್ ಹೊಂದಿರುವ 'ರಂಗನಾಯಕಿ' ಸಿನಿಮಾದ ಕಥೆ ಏನು ಅನ್ನೋದನ್ನ ನಿರ್ದೇಶಕ ದಯಾಳ್ ಪದ್ಮನಾಭನ್ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ದೇಶಾದ್ಯಂತ ಸದ್ದು ಮಾಡಿದ್ದ ನಿರ್ಭಯ ಅತ್ಯಾಚಾರ ಪ್ರಕರಣದ ಕೆಲವೊಂದು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟ ಆ ಹುಡುಗಿ ಒಂದು ವೇಳೆ ಬದುಕಿದ್ದರೆ ಹೇಗೆ ಜೀವನ ಮಾಡುತ್ತಿದ್ದಳು, ಸಮಾಜ ಆಕೆಯನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.
ಅತ್ಯಾಚಾರ ಸಂತ್ರಸ್ತೆ ಪಾತ್ರವನ್ನು ಅದಿತಿ ಪ್ರಭುದೇವ ನಿಭಾಯಿಸಿದ್ದಾರೆ. ಅದಿತಿ ಬಾಯ್ಫ್ರೆಂಡ್ ಪಾತ್ರದಲ್ಲಿ ಎಂ.ಜಿ.ಶ್ರೀನಿವಾಸ್ ನಟಿಸಿದ್ದಾರೆ. ಇಷ್ಟೆಲ್ಲಾ ವಿಚಾರಗಳಿದ್ದರೂ ನನ್ನ ಸಿನಿಮಾಗೆ ಯು ಸರ್ಟಿಫಿಕೇಟ್ ದೊರೆಯಲಿದೆ ಎಂದು ನಿರ್ದೇಶಕ ದಯಾಳ್ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾವನ್ನು ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಲು ದಯಾಳ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.