ಸದಾ ಹೊಸ ಹುರುಪು, ಹೊಸ ಆಯಾಮದಿಂದಲೇ ಸಿನಿಮಾ ನಿರ್ದೇಶನಕ್ಕೆ ಇಳಿಯುವ ಚೇತನ್ ಕುಮಾರ್ ಸದ್ಯಕ್ಕೆ ‘ಭರಾಟೆ’ ಚಿತ್ರದ ಬ್ಯುಸಿಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಮೂರನೇ ಹಾಡು ‘ಮರುಭೂಮಿ ಓಯಸಿಸ್...ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರ ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ ಎನ್ನುತ್ತಾರೆ ಚೇತನ್.
'ಭರಾಟೆ' ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ: ನಿರ್ದೇಶಕ ಚೇತನ್ ಕುಮಾರ್
'ಬಹದ್ದೂರ್' ಚಿತ್ರದಿಂದ ನಿರ್ದೇಶನ ಆರಂಭಿಸಿದ ಚೇತನ್ ಕುಮಾರ್ ನಂತರ 'ಭರ್ಜರಿ' ಸಿನಿಮಾ ಮಾಡಿದರು. ಈಗ ಬ ಅಕ್ಷರದಿಂದಲೇ 'ಭರ್ಜರಿ' ಸಿನಿಮಾ ಮಾಡಿದ್ದು ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಇದು ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ ಎನ್ನುತ್ತಾರೆ ಚೇತನ್.
'ಭರಾಟೆ' ಚಿತ್ರದಲ್ಲಿ ಆರು ಭರ್ಜರಿ ಸಾಹಸ ಸನ್ನಿವೇಶಗಳಿವೆ, 41 ಕಲಾವಿದರ ಜೊತೆ 91 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ರಾಜಸ್ಥಾನದಿಂದ ಚಿತ್ರ ಪ್ರಾರಂಭ ಆಗುತ್ತದೆ. ಅಲ್ಲಿ ಒಂದು ಹಾಡು ಹಾಗೂ ಚೇಸ್ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. 41 ಡಿಗ್ರಿ ಸೂರ್ಯನ ತಾಪ, ಧೂಳು, ಚಿಕ್ಕ ಚಿಕ್ಕ ಸ್ಥಳಗಳು ಎಲ್ಲವನ್ನೂ ನೆನಪಿಸಿಕೊಂಡರೆ ಮೈ ಜುಂ ಎನ್ನಿಸುತ್ತದೆ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು. ನಾಯಕಿ ಶ್ರೀ ಲೀಲಾ ಬಗ್ಗೆ ಮಾತನಾಡಿದ ಚೇತನ್ ಆಕೆಯ ಅಭಿನಯವನ್ನು ಮೆಚ್ಚಿಕೊಂಡರು. ಕೆಲವೊಂದು ದೃಶ್ಯಗಳಲ್ಲಿ ಕಣ್ಣೀರು ತುಂಬಿಕೊಂಡು ಬಹಳ ಸಹಜವಾಗಿ ಅಭಿನಯಿಸಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಶರ್ಮ ಮೂವರೂ ಸಹೋದರರು ನಟಿಸಿದ್ದು ಅವರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು.
ಚಿತ್ರದ ಟೀಸರ್ ಇದೇ ತಿಂಗಳ 29 ರಂದು ಬಿಡುಗಡೆ ಆಗಲಿದ್ದು ನಿನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಮುರಳಿ ಸುಮಾರು 18 ಬಗೆಯ ಕಾಸ್ಟ್ಯೂಮ್ ಧರಿಸಿದ್ದು ಪತ್ನಿ ವಿದ್ಯಾಶ್ರೀ ಮುರಳಿ ಅವರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ ಎನ್ನಲಾಗಿದೆ.