ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್. ಈ ಸಿನಿಮಾ ಕರ್ನಾಟಕ ಅಲ್ಲದೇ, ಬೇರೆ ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಶೋಗಳ ಪ್ರದರ್ಶನ ಕಾಣುವ ಜೊತೆಗೆ, ನಾಲ್ಕು ದಿನದಲ್ಲಿ ನೂರು ಕೋಟಿ ಗಳಿಸುವ ಮೂಲಕ ರೆಕಾರ್ಡ್ ಮಾಡಿದೆ.
ಜೇಮ್ಸ್ ಚಿತ್ರದ ಕುರಿತಂತೆ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿರುವುದು.. ಭಾನುವಾರದ ನಂತರ ಚಿತ್ರಮಂದಿರಗಳಿಗೆ ಸಿನಿ ಪ್ರೇಕ್ಷಕರು ಬರೋದು ಕಡಿಮೆ. ಆದರೆ, ಅಪ್ಪು ನಟನೆಯ ಜೇಮ್ಸ್ ಸಿನಿಮಾ ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಇಂದಿಗೂ ಅಭೂತಪೂರ್ವ ಪ್ರದರ್ಶನಗೊಳ್ಳುತ್ತಿದೆ. ಇದೀಗ ಜೇಮ್ಸ್ ಸಿನಿಮಾ ಮೇಲೆ ಕೆಲ ಬಿಜೆಪಿ ನಾಯಕರು ಕೆಂಗಣ್ಣು ಬೀರಿದ್ದಾರೆ. ಕೆಲ ಬಿಜೆಪಿ ನಾಯಕರು ಚಿತ್ರಮಂದಿರಗಳಲ್ಲಿ ಜೇಮ್ಸ್ ತೆಗೆದು ದಿ ಕಾಶ್ಮೀರಿ ಫೈಲ್ಸ್ ಚಿತ್ರ ಹಾಕಲು ಹೇಳುತ್ತಿರೋದು ಪವರ್ ಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಪುನೀತ್, ಪಾರ್ವತಮ್ಮ ಹೆಸರಲ್ಲಿ ಮೈಸೂರು ವಿವಿಯಿಂದ ಇನ್ಮುಂದೆ 2 ಚಿನ್ನದ ಪದಕ: ರಾಘವೇಂದ್ರ ರಾಜ್‌ಕುಮಾರ್
ಈ ವಿಚಾರವಾಗಿ ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಈಗ ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, ಚಿತ್ರಮಂದಿರದ ಮಾಲೀಕರು, ವಿತರಕರು ಹಾಗೂ ಪ್ರದರ್ಶಕರಿಗೆ ದಯಮಾಡಿ ನೀವು ಹಾಕಿರುವ ಜೇಮ್ಸ್ ಸಿನಿಮಾ ತೆಗೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಪ್ಪು ಸರ್ ಅಭಿನಯದ ಕೊನೆಯ ಸಿನಿಮಾ ಇದು.
ಈ ಸಿನಿಮಾ ಕೋಟ್ಯಂತರ ಅಭಿಮಾನಿಗಳ ಭಾವನೆಗೆ ಸಂಬಂಧಿಸಿದ್ದಾಗಿದೆ. ಇನ್ನು ಕೋಟ್ಯಂತರ ಅಭಿಮಾನಿಗಳು ಈ ಚಿತ್ರವನ್ನ ನೋಡಬೇಕು. ದಯವಿಟ್ಟು ಚಿತ್ರಮಂದಿರದಿಂದ ಜೇಮ್ಸ್ ಸಿನಿಮಾವನ್ನು ತೆಗೆಯಬೇಡಿ. ಜೊತೆಗೆ ಅಪ್ಪು ಸರ್ ಅಭಿಮಾನಿಗಳ ಭಾವನೆಗಳನ್ನ ಕೆರಳಸಬೇಡಿ ಅಂತಾ ನಿರ್ದೇಶಕ ಚೇತನ್ ಕುಮಾರ್ ಕೇಳಿಕೊಂಡಿದ್ದಾರೆ.