ಮಯೂರ, ಗಂಧದ ಗುಡಿ, ನಾ ನಿನ್ನ ಬಿಡಲಾರೆ, ಮೋಜುಗಾರ ಸೊಗಸುಗಾರ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದ ಬಿ. ವಿಜಯ್ ರೆಡ್ಡಿ ನಿನ್ನೆ ಚೈನ್ನೈನಲ್ಲಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ವಿಜಯ್ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ನಿರ್ದೇಶಕ ಬಿ. ವಿಜಯ್ ರೆಡ್ಡಿ ಕನ್ನಡದಲ್ಲಿ ವಿಜಯ್ ರೆಡ್ಡಿ ಅವರು ಸುಮಾರು 40 ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದರಲ್ಲಿ ಡಾ. ರಾಜ್ಕುಮಾರ್ ಅವರ 7 ಚಿತ್ರಗಳನ್ನು ನಿರ್ದೇಶಿಸಿದ್ದರು. ಕನ್ನಡದ ಮತ್ತೊಬ್ಬ ನಿರ್ದೇಶಕ ವಿ. ಸೋಮಶೇಖರ್ ಅವರೊಂದಿಗೆ ಸೇರಿ ವಿಜಯ್ ಶೇಖರ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಕೆಲವೊಂದು ಕನ್ನಡ ಚಿತ್ರಗಳನ್ನು ನಿರ್ಮಾಣ ಕೂಡಾ ಮಾಡಿದ್ದರು. ವಿಜಯ್ ರೆಡ್ಡಿ ನಿರ್ದೇಶಿಸಿದ್ದ ಮಯೂರ, ಗಂಧದ ಗುಡಿ, ಹುಲಿಯ ಹಾಲಿನ ಮೇವು, ಸನಾದಿ ಅಪ್ಪಣ್ಣ, ನೀ ನನ್ನ ಗೆಲ್ಲಲಾರೆ, ನಾ ನಿನ್ನ ಮರೆಯಲಾರೆ, ಭಕ್ತ ಪ್ರಹ್ಲಾದ, ನಾ ನಿನ್ನ ಬಿಡಲಾರೆ, ಮುಳ್ಳಿನ ಗುಲಾಬಿ, ಖದೀಮ ಕಳ್ಳರು, ಮೋಜುಗಾರ ಸೊಗಸುಗಾರ, ಕರ್ನಾಟಕ ಸುಪುತ್ರ, ಆಟೋ ರಾಜ ಸೇರಿ ಅನೇಕ ಸಿನಿಮಾಗಳು ದೊಡ್ಡ ಹಿಟ್ ಆಗಿತ್ತು. ಆದರೆ ಅವರು ಡಾ. ರಾಜ್ಕುಮಾರ್ ಅವರೊಂದಿಗೆ ಮಾಡಬೇಕು ಎಂದುಕೊಂಡಿದ್ದ 'ಭಕ್ತ ಅಂಬರೀಷ' ಚಿತ್ರದ ಕನಸು ಈಡೇರಲಿಲ್ಲ.
22 ಜೂನ್ 2000 ರಂದು 'ಭಕ್ತ ಅಂಬರೀಷ' ಚಿತ್ರದ ಹಾಡುಗಳ ಧ್ವನಿ ಮುದ್ರಣಕ್ಕೆ ಪೂಜೆ ಆಗಿತ್ತು. ನಾದಬ್ರಹ್ಮ ಹಂಸಲೇಖ ಅವರು 8 ಹಾಡುಗಳು ಮತ್ತು ಎರಡು ಕಂದ ಪದ್ಯಗಳ ತಯಾರಿ ಕೂಡಾ ಮಾಡಿಕೊಂಡಿದ್ದರು. ಈ ಚಿತ್ರದ ಹಾಡಿನ ಪೂಜಾ ಸಮಾರಂಭ ಆಕಾಶ್ ಆಡಿಯೋದಲ್ಲಿ ನೆರವೇರಿತ್ತು. ಡಾ. ರಾಜ್ಕುಮಾರ್, ಪಾರ್ವತಮ್ಮ ರಾಜಕುಮಾರ್, ಬಿ. ವಿಜಯ ರೆಡ್ಡಿ, ವರದಪ್ಪ, ರಾಘವೇಂದ್ರ ರಾಜಕುಮಾರ್, ಹಂಸಲೇಖ ಹಾಗೂ ಇನ್ನಿತರರು ಅಂದು ಹಾಜರಿದ್ದರು. ಆದರೆ ವಿಧಿ ಆಟವೆ ಬೇರೆ ಆಗಿತ್ತು. ಅದೇ ವರ್ಷ ಜುಲೈ 30 ರಂದು ಡಾ. ರಾಜ್ಕುಮಾರ್ ಅಪಹರಣವಾಯಿತು. ಸುಮಾರು 108 ದಿನಗಳ ಬಳಿಕ ಅಣ್ಣಾವ್ರು ಸುರಕ್ಷಿತವಾಗಿ ವಾಪಸಾದರೂ ಅವರಿಗೆ ಮಂಡಿ ನೋವು ಬಹಳ ಕಾಡಿತ್ತು. 4 ವರ್ಷಗಳ ವಿಶ್ರಾಂತಿ ಬಳಿಕ ಡಾ. ರಾಜ್ಕುಮಾರ್ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.
ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ವಿಜಯ್ ರೆಡ್ಡಿ ಈ ಚಿತ್ರಕ್ಕಾಗಿ ಹಾಡುಗಳ ಧ್ವನಿ ಮುದ್ರಣಕ್ಕೆ, ವಸ್ತ್ರ ವಿನ್ಯಾಸಕ್ಕೆ ಪಾರ್ವತಮ್ಮ ರಾಜ್ಕುಮಾರ್ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮಯೂರ ಚಿತ್ರದ ನಂತರ 'ಭಕ್ತ ಅಂಬರೀಷ' ಶೂಟಿಂಗ್ ಮೈಸೂರು ಅರಮನಯಲ್ಲಿ ಮಾಡಬೇಕು ಎಂದು ಪ್ಲ್ಯಾನ್ ಮಾಡಲಾಗಿತ್ತು. ಇದರೊಂದಿಗೆ ಕೇದಾರನಾಥ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಹಾಗೂ ಒಂದು ದೊಡ್ಡ ದೇವಸ್ಥಾನದ ಸೆಟ್ ಮಾಡಬೇಕು ಎಂದು ನಿರ್ಧಾರವಾಗಿತ್ತು. ತೆಲುಗು ಖ್ಯಾತ ನಟಿಯರಾದ ಜಯಸುದ ಅಥವಾ ಭಾನುಪ್ರಿಯ ಡಾ. ರಾಜ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.
ಆದರೆ 20 ವರ್ಷಗಳಾದರೂ ವಿಜಯ್ ರೆಡ್ಡಿ ಕನಸಿನ ಕೂಸು 'ಭಕ್ತ ಅಂಬರೀಷ' ಸಿನಿಮಾ ಸೆಟ್ಟೇರಲೇ ಇಲ್ಲ. ಡಾ. ರಾಜ್ಕುಮಾರ್ 12 ಏಪ್ರಿಲ್ 2006 ರಂದು ಕಾಲವಾದ ನಂತರ 2009 ಮೊದಲ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಡಾ. ಪಾರ್ವತಮ್ಮ ರಾಜಕುಮಾರ್ ಅವರು ಮಾತನಾಡಿ "ಯಜಮಾನರು ಮಾಡಲು ಆಗದ 'ಭಕ್ತ ಅಂಬರೀಷ' ಚಿತ್ರವನ್ನು ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅಭಿನಯದಲ್ಲಿ ಚಿತ್ರೀಕರಣ ಮಾಡಲು ಚರ್ಚೆ ಆಗುತ್ತಿದೆ. ಬಿ. ವಿಜಯ್ ರೆಡ್ಡಿ ಅವರೇ ನಿರ್ದೇಶನ ಕೂಡಾ ಮಾಡಲಿದ್ದಾರೆ" ಎಂದು ಹೇಳಿದ್ದರು. ಆದರೆ ಅದೂ ಕೂಡಾ ಕೈಗೂಡಲಿಲ್ಲ. ವಿಜಯ್ ರೆಡ್ಡಿ ನಿಧನರಾಗಿದ್ದಾರೆ. ಕೊನೆಗೂ ಅವರ ಕನಸು ಕನಸಾಗೇ ಉಳಿಯಿತು.
ಡಾ. ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿರುವ ವಿಜಯ್ ರೆಡ್ಡಿ ಡಾ. ರಾಜ್ಕುಮಾರ್ ಅವರು ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕೇಶ್ ಅವರೊಂದಿಗೆ ಜೊತೆ ಸೇರಿ 'ಭಕ್ತ ಅಂಬರೀಷ' ನಾಟಕದಲ್ಲಿ ಪಾತ್ರ ಮಾಡಿದ್ದರು. ಹಿರಿಯ ನಟ ಶ್ರೀನಿವಾಸಮೂರ್ತಿ ಕೂಡಾ 'ಭಕ್ತ ಅಂಬರೀಷ' ನಾಟಕವನ್ನು ಸಾಕಷ್ಟು ಬಾರಿ ಪ್ರದರ್ಶಿಸಿದ್ದರು. ಉಡುಪಿಯಲ್ಲಿ ಕೂಡಾ ಶ್ರೀನಿವಾಸಮೂರ್ತಿ ಅವರು ಒಂದು ತಂಡವನ್ನು ಕಟ್ಟಿಕೊಂಡು ನಾಟಕ ಪ್ರದರ್ಶನ ನೀಡಿದ್ದು ಬಹಳ ಯಶಸ್ವಿ ಆಗಿತ್ತು.
ಅನಾರೋಗ್ಯ ಕಾಡುತ್ತಿದ್ದರೂ 2018 ರಲ್ಲಿ ಡಾ. ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ ಸ್ವೀಕರಿಸಲು ಡಾ. ರಾಜ್ಕುಮಾರ್ ಸ್ಮಾರಕದ ಬಳಿ ನಡೆದ ಕಾರ್ಯಕ್ರಮಕ್ಕೆ ವಿಜಯ್ ರೆಡ್ಡಿ ಆಗಮಿಸಿದ್ದರು. ಆ ಸಮಯದಲ್ಲಿ ಪುನೀತ್ ರಾಜ್ಕುಮಾರ್ ಅವರೇ ಮೈಕ್ ಹಿಡಿದು ವಿಜಯ್ ರೆಡ್ಡಿ ಅವರು ಮಾತನಾಡಲು ಸಹಕರಿಸಿದ್ದರು. ಆ ವೇಳೆ ಹಿರಿಯ ನಟಿ ಜಯಂತಿ ಕೂಡಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿನ್ನೆ ವಿಜಯ್ ರೆಡ್ಡಿ ನಿಧನದ ಸುದ್ದಿ ತಿಳಿದ ಪುನೀತ್ ರಾಜ್ಕುಮಾರ್ ಬಹಳ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಾಕಿ ಸಂತಾಪ ವ್ಯಕ್ತಪಡಿಸಿದ್ದರು.