ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಯಾರಿಂದ ತಾನೇ ಮರೆಯಲು ಸಾಧ್ಯ..? ಅವರ ಸಿನಿಮಾಗಳು, ಅವರ ವಾಕಿಂಗ್ ಸ್ಟೈಲ್ ಎಲ್ಲವೂ ಇಂದಿಗೂ ಹಸಿರಾಗಿದೆ. ಎಲ್ಲಕ್ಕಿಂತ ಅವರಿಗೆ ಆಟೋ ಚಾಲಕರೇ ಹೆಚ್ಚು ಅಭಿಮಾನಿಗಳು ಎಂದರೂ ತಪ್ಪಿಲ್ಲ.
ಕನ್ನಡಿಗರು ಮಾತ್ರವಲ್ಲ, ಇತರ ಭಾಷೆಯ ಕಲಾವಿದರು ಕೂಡಾ ಶಂಕರ್ ನಾಗ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಸಂಸದೆ, ರಾಮಾಯಣ ಖ್ಯಾತಿಯ ದೀಪಿಕಾ ಚಿಕಾಲಿಯ ಕೂಡಾ ಶಂಕ್ರಣ್ಣನನ್ನು ನೆನಪಿಸಿಕೊಂಡಿದ್ದಾರೆ. ದೀಪಿಕಾ ರಾಮಾಯಣದಿಂದ ಖ್ಯಾತರಾದ ನಂತರ ಕನ್ನಡ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದರು. ಶಂಕರ್ ನಾಗ್ ಜೊತೆಗೆ 'ಹೊಸ ಜೀವನ ' ಹಾಗೂ ಅಂಬರೀಶ್ ಜೊತೆಗೆ 'ಇಂದ್ರಜಿತ್ ' ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ.
'ಹೊಸ ಜೀವನ ' ಚಿತ್ರದ ಹಾಡೊಂದನ್ನು ತಮ್ಮ ಫೇಸ್ಬುಕ್ನಲ್ಲಿ ಷೇರ್ ಮಾಡಿಕೊಂಡಿರುವ ದೀಪಿಕಾ 'ಇದು 'ಹೊಸ ಜೀವನ' ಕನ್ನಡ ಚಿತ್ರದ ಹಾಡು, ಚಿತ್ರದ ಕೊನೆಯ ಶೆಡ್ಯೂಲ್ ಮುಗಿಯುತ್ತಿದ್ದಂತೆ ನನ್ನ ಸಹನಟ ಶಂಕರ್ ನಾಗ್ ಅಪಘಾತದಲ್ಲಿ ನಿಧನರಾದರು. ಆ ಸುದ್ದಿ ಕೇಳಿ ನನಗೆ ಬಹಳ ದು:ಖವಾಯಿತು. ಆ ಶಾಕ್ನಿಂದ ಹೊರಬರಲು ಸಾಕಷ್ಟು ದಿನಗಳೇ ಬೇಕಾಯಿತು. ಸಿನಿಮಾ ಹಿಟ್ ಆದರೂ ಶಂಕರ್ ಅವರನ್ನು ಕಳೆದುಕೊಂಡ ದು:ಖ ಇನ್ನೂ ಕಾಡುತ್ತಿದೆ' ಎಂದು ದೀಪಿಕಾ ಬರೆದುಕೊಂಡಿದ್ದಾರೆ.
'ಹೊಸ ಜೀವನ ' ಚಿತ್ರದಲ್ಲಿ ಶಂಕರ್ ನಾಗ್, ದೀಪಿಕಾ
1990 ಸೆಪ್ಟೆಂಬರ್ 30 ಶಂಕರ್ನಾಗ್ ನಮ್ಮನ್ನೆಲ್ಲಾ ಅಗಲಿದರು. ದೀಪಿಕಾ ಶಂಕರ್ನಾಗ್ ಅವರೊಂದಿಗೆ ಅಭಿನಯಿಸಿದ್ದು ಕೇವಲ ಒಂದು ಸಿನಿಮಾವಾದರೂ ಶಂಕರ್ನಾಗ್ ಅವರನ್ನು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ ಎಂದರೆ ಅವರ ಖ್ಯಾತಿ ಎಷ್ಟಿರಬಹುದೆಂದು ನೀವೇ ಊಹಿಸಿ.