ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಆರತಿ ಅಭಿನಯಿಸಿದ್ದ 'ರಂಗನಾಯಕಿ' ಸಿನಿಮಾ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಇದೇ ಹೆಸರಿನ ಸಿನಿಮಾವನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿದ್ದಾರೆ.
ಇಂದು ದಯಾಳ್ ಅವರ ಕಥೆ ಹೊಂದಿರುವ 'ರಂಗನಾಯಕಿ' ಕಾದಂಬರಿ ಬಿಡುಗಡೆ ಹಾಗೂ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಜೊತೆಗೆ ಚಿತ್ರದ ಮೊದಲ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ 'ರಂಗನಾಯಕಿ' ಚಿತ್ರದ ಲಾಂಚ್ ಹಾಗೂ ಮೊದಲ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಡೈನಾಮಿಕ್ ಲೇಡಿ, ಡಿಐಜಿ ರೂಪ ಆಗಮಿಸಿದ್ದರು. 'ರಂಗನಾಯಕಿ' ಕಿರು ಕಾದಂಬರಿ ಹಾಗೂ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿದ ರೂಪ ಚಿತ್ರತಂಡಕ್ಕೆ ವಿಶ್ ಮಾಡಿದರು.
'ರಂಗನಾಯಕಿ' ಕಾದಂಬರಿ, ಟೀಸರ್ ಬಿಡುಗಡೆ ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬಹಳ ಕಡಿಮೆಯಾಗುತ್ತಿವೆ. ಇಂತಹ ಸಮಯದಲ್ಲಿ ನಿರ್ದೇಶಕ ದಯಾಳ್ ಮಹಿಳಾ ಪ್ರಧಾನ 'ರಂಗನಾಯಕಿ' ಚಿತ್ರವನ್ನು ಮಾಡುತ್ತಿರುವುದು ಖುಷಿಯ ವಿಚಾರ. ನಾನು 5 ವರ್ಷದವಳಾಗಿದ್ದಾಗ ಪುಟ್ಟಣ್ಣ ಕಣಗಾಲ್ ಅವರ 'ರಂಗನಾಯಕಿ' ಚಿತ್ರವನ್ನು ಅಪ್ಪ-ಅಮ್ಮನ ಜೊತೆ ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೆ ಎಂದು ಹಳೆಯ ನೆನಪು ಮೆಲುಕು ಹಾಕಿದರು.
ಈ ಸಿನಿಮಾ ದಯಾಳ್ ನಿರ್ದೇಶನದ 17 ನೇ ಚಿತ್ರವಾಗಿದೆ. ಬರೋಬ್ಬರಿ ಏಳು ವರ್ಷಗಳಿಂದ ಚಿತ್ರಕಥೆಯನ್ನು ರೆಡಿ ಮಾಡಿದ್ದು 'ರಂಗನಾಯಕಿ' ಎಂಬ ಕಿರು ಕಾದಂಬರಿಯನ್ನೂ ಸಹ ಬರೆದು ಈಗ ಅದೇ ಕಾದಂಬರಿಯನ್ನು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಕಾದಂಬರಿಗೆ 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವೇ ಸ್ಫೂರ್ತಿಯಾಗಿದ್ದು, ಒಂದು ಹೆಣ್ಣಿನ ಮೇಲೆ ಆಕಸ್ಮಿಕವಾಗಿ ಅತ್ಯಾಚಾರವಾದರೆ ಆ ಹೆಣ್ಣು ಈ ಸಮಾಜವನ್ನು ಯಾವ ರೀತಿ ಎದುರಿಸಬೇಕು, ಅಂತಹ ಹೆಣ್ಣನ್ನು ನಮ್ಮ ಸಮಾಜ ಯಾವ ರೀತಿ ನೋಡುತ್ತದೆ ಎಂಬುದರ ಸುತ್ತ ಚಿತ್ರದ ಕಥೆ ಹೆಣೆದಿರುವುದಾಗಿ ದಯಾಳ್ ಪದ್ಮನಾಭನ್ ತಿಳಿಸಿದರು.
ಚಿತ್ರದಲ್ಲಿ ರಂಗನಾಯಕಿಯಾಗಿ ಅಧಿತಿ ಪ್ರಭುದೇವ ನಟಿಸುತ್ತಿದ್ದು, ನಾನು ಒಬ್ಬ ಪರಿಪೂರ್ಣ ನಟಿ ಎಂಬುದನ್ನು ಪ್ರೂವ್ ಮಾಡಲು ನನಗೆ ಈ ಚಿತ್ರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಬೀರ್ಬಲ್ ಖ್ಯಾತಿಯ ನಟ, ನಿರ್ದೇಶಕ ಶ್ರೀನಿ ಹಾಗೂ ಕಿರುತೆರೆಯ ನಟ ತ್ರಿವಿಕ್ರಮ್ ನಟಿಸಿದ್ದಾರೆ. ಬಿಗ್ಬಾಸ್ ಖ್ಯಾತಿಯ ಲಾಸ್ಯ ಕೂಡಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ನಾಳೆಯಿಂದ ಚಿತ್ರದ ಶೂಟಿಂಗ್ ಆರಂಭವಾಗುತ್ತಿದೆ. 30 ದಿನಗಳಲ್ಲಿ ಶೂಟಿಂಗ್ ಮುಗಿಸಲು ದಯಾಳ್ ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರವನ್ನು 'ತ್ರಯಂಬಕಂ' ಚಿತ್ರ ನಿರ್ಮಿಸಿದ್ದ ಎಸ್.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ. ಆಗಸ್ಟ್ನಲ್ಲೇ ಸಿನಿಮಾ ಬಿಡುಗಡೆ ಮಾಡಲು ದಯಾಳ್ ತಯಾರಿ ಮಾಡಿಕೊಂಡಿದ್ದಾರೆ.