ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ತಮ್ಮ ಸಮುದಾಯವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದರು. ಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಒತ್ತಾಯಿಸಿದ್ದರು. ಸಿನಿಮಾ ದೃಶ್ಯಗಳನ್ನು ಎಡಿಟ್ ಮಾಡುವುದಾಗಿ ಚಿತ್ರತಂಡ ಕೂಡಾ ಒಪ್ಪಿಗೆ ನೀಡಿತ್ತು. ಈ ವಿಚಾರವಾಗಿ ಧ್ರುವ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
'ಪೊಗರು' ವಿವಾದ...ಫಿಲ್ಮ್ ಚೇಂಬರ್ಗೆ ತೆರಳಿ ಮನವಿ ಸಲ್ಲಿಸಿದ ಧ್ರುವ ಅಭಿಮಾನಿಗಳು
ಫೆಬ್ರವರಿ 19 ರಂದು 'ಪೊಗರು' ಸಿನಿಮಾ ಬಿಡುಗಡೆ ಆದಾಗಿನಿಂದ ವಿವಾದ ಭುಗಿಲೆದ್ದಿದೆ. ನಮ್ಮ ಸಮುದಾಯವನ್ನು ಅಪಮಾನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ಆರೋಪಿಸಿದರೆ, ಮತ್ತೊಂದೆಡೆ ಚಿತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಧ್ರುವ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನೆಚ್ಚಿನ ನಟನಿಗೆ ಮುತ್ತಿಗೆ ಹಾಕಿದ್ದಕ್ಕೆ ಅಸಮಾಧಾನ; ಫಿಲ್ಮ್ ಚೇಂಬರ್ ಬಳಿ ಆಗಮಿಸಿದ ನಟ ಜಗ್ಗೇಶ್ ಅಭಿಮಾನಿಗಳು
"ಸಿನಿಮಾವನ್ನು ಸಿನಿಮಾವನ್ನಾಗಿ ನೋಡಬೇಕು, ಚಿತ್ರತಂಡ ಈಗಾಗಲೇ ಕ್ಷಮೆ ಕೇಳಿ, ಆ ದೃಶ್ಯಗಳನ್ನು ತೆಗೆಯುವುದಾಗಿ ಹೇಳಿದ್ದರೂ ಚಿತ್ರದ ಕೆಲವೊಂದು ವಿಡಿಯೋ ಕ್ಲಿಪ್ಪಿಂಗ್ ಬಳಸಿಕೊಂಡು ಸಿನಿಮಾ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹೀಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು" ಎಂದು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಫಿಲ್ಮ್ ಚೇಂಬರ್ಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, 'ಚಿತ್ರದ ಬಗ್ಗೆ ಅಪಪ್ರಚಾರ ಮಾಡಬಾರದು, ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಾಕಾರಿ ಹೇಳಿಕೆ ನೀಡಿದ್ದಲ್ಲಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದ್ದಾರೆ.