ಸ್ಯಾಂಡಲ್ವುಡ್ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ 23 ದಿನಗಳ ಕಳೆದಿವೆ. ಅಭಿಮಾನಿಗಳಿಗೆ, ಕುಟುಂಬದವರಿಗೆ, ಸ್ನೇಹಿತರಿಗೆ ಚಿರು ನೆನಪು ಪ್ರತಿದಿನ ಕಾಡುತ್ತಲೇ ಇದೆ. ಅವರು ಇಂದು ಇದ್ದಿದ್ದರೆ ಬಾಕಿ ಉಳಿದಿರುವ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು.
ಚಿರು ಅಭಿನಯದ 'ಕ್ಷತ್ರಿಯ' ಚಿತ್ರದ ಕೆಲವು ಭಾಗಗಳಿಗೆ ಗ್ರಾಫಿಕ್ಸ್ ಅಳವಡಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ನಿರ್ದೇಶಕ ಅನಿಲ್ ಮಂಡ್ಯ. ಈ ಚಿತ್ರಕ್ಕೆ ಶೇಕಡಾ 80 ರಷ್ಟು ಭಾಗ ಚಿತ್ರೀಕರಣವಾಗಿತ್ತು. ಉಳಿದ ಭಾಗದ ಚಿತ್ರೀಕರಣ ಲಾಕ್ಡೌನ್ ಸಡಿಲಿಕೆ ನಂತರ ಆರಂಭವಾಗಬೇಕಿತ್ತು. ಆದರೆ ಇದೀಗ ಚಿರಂಜೀವಿ ಸರ್ಜಾ ಅವರ ಭಾಗಕ್ಕೆ ಗ್ರಾಫಿಕ್ಸ್ ಅಳವಡಿಸಲು ಚಿಂತಿಸಲಾಗಿದೆ. ಚಿತ್ರೀಕರಣ ಆದ ಭಾಗಕ್ಕೆ ನಿರ್ಮಾಪಕ ವೆಂಕಟೇಶ್ ಎಡಿಟಿಂಗ್ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಈ ಚಿತ್ರದಲ್ಲಿ ಚಿರು ಅವರೊಂದಿಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ದೇವರಾಜ್, ಸುಧಾರಾಣಿ, ಸಾಧು ಕೋಕಿಲ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಧರ್ಮ ವಿಶ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅಕ್ಕನಿಗೆ ತರ್ಲೆ ತಮ್ಮನಾಗಿ ಸಮಾಜಕ್ಕೆ ಒಳ್ಳೆಯದನ್ನು ಬಯಸುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.
'ರಾಜ ಮಾರ್ತಾಂಡ ' ಚಿತ್ರದ ಮುಹೂರ್ತ
ಚಿರಂಜೀವಿ ಸರ್ಜಾ ಅಭಿನಯದ ಮತ್ತೊಂದು ಚಿತ್ರ 'ರಾಜ ಮಾರ್ತಾಂಡ ' ಡಬ್ಬಿಂಗ್ ಹಂತದಲ್ಲಿದೆ. ಗೀತರಚನೆಕಾರ ರಾಮ್ ನಾರಾಯಣ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಚಿರು ಅವರಿಗೆ ಸಹೋದರ ಧ್ರುವಾ ಸರ್ಜಾ ಧ್ವನಿ ನೀಡಲಿದ್ದಾರೆ. ಈ ಚಿತ್ರದ ಒಂದು ಹಾಡಿನ ಚಿತ್ರೀಕರಣ ಕೂಡಾ ಬಾಕಿ ಇತ್ತು. ಆದರೆ ಇದೀಗ ಅದನ್ನು ಕೈ ಬಿಡಲಾಗಿದೆ. ಚಿತ್ರಕ್ಕೆ ದಿವ್ಯ ಎನ್, ಸಾಯಿ ಸೂರ್ಯ ಎನ್, ಪ್ರಣವ್ ಗೌಡ ಹಾಗೂ ಪುನೀತ್ ಗೌಡ ಬಂಡವಾಳ ಹೂಡಿದ್ದಾರೆ. ಶ್ರೀ ಮಾದೇಶ್ವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾದ ಹಾಡುಗಳ ಹಕ್ಕನ್ನು ಆನಂದ್ ಆಡಿಯೋ ಬಿಡುಗಡೆ ಮಾಡುತ್ತಿದೆ. ಅರ್ಜುನ್ ಜನ್ಯ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ದೀಪ್ತಿ ಶಾಹಿ, ತ್ರಿವೇಣಿ, ಕೆ.ಎಸ್. ಶ್ರೀಧರ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.