ಬೆಂಗಳೂರು: ಕಳೆದ ಮೂರು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಶಿವರಾಮ್(83) ನಿಧನರಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
ಚಂದನವನದ ಹಿರಿಯ ನಟನ ಸಾವಿಗೆ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಶಿವರಾಮ್ ಅಣ್ಣನ ಸಾವಿನ ಸುದ್ದಿ ಕೇಳಿ ಅತೀವ ನೋವಾಗಿದೆ ಎಂದಿರುವ ಕುಂಬ್ಳೆ, ಶಿವರಾಮ್ ಅವರು ಐಕಾನ್ ಮತ್ತು ಕನ್ನಡದ ಜ್ಞಾನ ದೇಗುಲ ಎಂದಿದ್ದಾರೆ.
ಇದನ್ನೂ ಓದಿರಿ:ಚಂದನವನದ ಹಿರಿಯ ನಟ ಶಿವರಾಮ್ ನಿಧನ.. ಕಂಬನಿ ಮಿಡಿದ ಸಿಎಂ, ಬಿಎಸ್ವೈ
ನಾಡಿನ ಶ್ರೀಮಂತ ಪರಂಪರೆ ಬಿಟ್ಟು ಬಿಟ್ಟು ಅವರು ಹೋಗಿದ್ದು, ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕುಟುಂಬಸ್ಥರು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.
1965ರಲ್ಲಿ 'ಬೆರೆತ ಜೀವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಗ್ಗ ಹಾಕಿದ್ದ ಶಿವರಾಮ್ ಅವರು, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಇಂದಿನ ನಟರೊಂದಿಗೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು.