ಕನ್ನಡ ಚಿತ್ರರಂಗದಿಂದ ಸಿನಿಮಾ ಪಯಣ ಶುರು ಮಾಡಿ ಇದೀಗ ಬಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಅವರು ನಟ ರಣವೀರ್ ಸಿಂಗ್ ಮದುವೆಯಾಗಿ, ಬಾಲಿವುಡ್ನ ಕ್ಯೂಟ್ ಕಪಲ್ ಅಂತಾನೇ ಕರೆಯಿಸಿಕೊಂಡಿದ್ದಾರೆ. ಸದ್ಯಕ್ಕೆ ದೀಪಿಕಾ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೀಪಿಕಾ ಮತ್ತು ರಣವೀರ್ ಸಿಂಗ್ ಜತೆಯಾಗಿ ‘83’ ಸಿನಿಮಾದಲ್ಲಿ ನಟಿಸಿದ್ದಾರೆ. 1983ರ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ತಂಡ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಡಿ.24ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಿನಿಮಾ ಪ್ರಚಾರ ಕಾರ್ಯದ ಸಲುವಾಗಿ ಇತ್ತೀಚೆಗೆ ರಣವೀರ್ ಸಿಂಗ್ ಬೆಂಗಳೂರಿಗೆ ಬಂದಿದ್ದರು.
ಆ ವೇಳೆ ರಣವೀರ್, ದೀಪಿಕಾಗೆ ವಿಡಿಯೋ ಕಾಲ್ ಮಾಡಿ, ಕಿಚ್ಚ ಸುದೀಪ್ ಅವರ ಪರ್ಸನಲ್ ಬಾಡಿಗಾರ್ಡ್ ಜೊತೆ ಕಿರಣ್ ಮಾತನಾಡಿಸಿದ್ದಾರೆ. ಕಿರಣ್ ಕನ್ನಡದಲ್ಲೇ ಮಾತನಾಡಿದ್ದು, ಇದಕ್ಕೆ ದೀಪಿಕಾ ಇಂಗ್ಲಿಷ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
ಸುದೀಪ್ ಅಂಗರಕ್ಷಕನಾಗಿರುವ ಕಿಚ್ಚ ಕಿರಣ್ ಕೈಮೇಲೆ ಸುದೀಪ್ ಕುರಿತು ಹಲವು ಅರ್ಥ ಕೊಡುವ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡಿದ್ದಾರೆ. ಇದನ್ನ ಗಮನಿಸಿದ ರಣವೀರ್ ಸಿಂಗ್, ಈ ಅಭಿಮಾನಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಪತ್ನಿ ದೀಪಿಕಾ ಪಡುಕೋಣೆಗೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.
ಕಿಚ್ಚ ಕಿರಣ್, ದೀಪಿಕಾ ಪಡುಕೋಣೆ ಮೇಲೆ ವಿಶೇಷವಾದ ಅಭಿಮಾನ ಹೊಂದಿದ್ದಾರೆ. ನಾನು ಸುದೀಪ್ ಸಾರ್ ಬಾಡಿಗಾರ್ಡ್, ಅದಕ್ಕೆ ನನಗೆ ಕಿಚ್ಚ ಕಿರಣ್ ಅಂತಾ ಕರೆಯುತ್ತಾರೆ ಅಂತಾ ಹೇಳಿದಾಗ ದೀಪಿಕಾ ಪಡುಕೋಣೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.