ನಟ ಕೋಮಲ್ ಕುಮಾರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕೊಲೆ ಯತ್ನ(307) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುವುದಾಗಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಕೋಮಲ್ ಮೇಲೆ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು - ಸಂಪಿಗೆ ಥಿಯೇಟರ್
ಜಗ್ಗೇಶ್ ಸಹೋದರ, ನಟ ಕೋಮಲ್ ಕುಮಾರ್ ಮೇಲೆ ಇಂದು ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು, ಆತನ ಮೇಲೆ ಐಪಿಸಿ ಸೆಕ್ಷನ್ 307ರ ಪ್ರಕಾರ ಕೊಲೆ ಯತ್ನ ದೂರು ದಾಖಲಿಸಿಕೊಂಡಿರುವುದಾಗಿ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಇಂದು ಸಂಜೆ ನಟ ಕೋಮಲ್ ತಮ್ಮ ಮಗಳನ್ನು ಟ್ಯೂಷನ್ಗೆ ಬಿಡುಲು ಹೋಗುವ ವೇಳೆ ವಿಜಯ್ ಎಂಬ ವ್ಯಕ್ತಿ ಸಂಪಿಗೆ ಥಿಯೇಟರ್ ಅಂಡರ್ ಪಾಸ್ ಬಳಿ ನಟ ಕೋಮಲ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ವಿಚಾರವಾಗಿ ಕೋಮಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಡಿಸಿಪಿ ಶಶಿಕುಮಾರ್, ಮಲ್ಲೇಶ್ವರಂ ಠಾಣೆಗೆ ಆಗಮಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿ ಕೇಸ್ ದಾಖಲಿಸಿರುವುದಾಗಿ ತಿಳಿಸಿದರು.
ಅಲ್ಲದೆ ಮಲ್ಲೇಶ್ವರಂ ಠಾಣೆಯಲ್ಲಿ ಈ ಪ್ರಕರಣವನ್ನು ತನಿಖೆ ಮಾಡುವುದಾಗಿ ಹೇಳಿದ ಡಿಸಿಪಿ, ಆರೋಪಿ ವಿಜಯ್ ಮಾದಕ ವಸ್ತು ಸೇವಿಸಿದ್ದನೇ, ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ಹಲ್ಲೆ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿರುವುದಾಗಿ ಡಿಸಿಪಿ ಶಶಿಕುಮಾರ್ ತಿಳಿಸಿದರು. ಅಲ್ಲದೆ ಇದು ಉದ್ದೇಶಪೂರ್ವಕವಾಗಿ ನಡೆದಿರುವ ಹಲ್ಲೆ ಇರಬಹುದಾ ಎಂಬುದನ್ನು ಪ್ರಕರಣ ತನಿಖೆ ಮಾಡಿದ ನಂತರ ತಿಳಿಯುತ್ತದೆ. ಅಲ್ಲದೆ ಕೋಮಲ್ ಅವರ ಮನೆ ಮಲ್ಲೇಶ್ವರಂನಲ್ಲೇ ಇದ್ದು, ಆರೋಪಿ ರಾಂಪುರ ನಿವಾಸಿಯಾಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಒಂದೆರಡು ದಿನ ಕೋಮಲ್ ಕುಮಾರ್ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸುವುದಾಗಿ ಡಿಸಿಪಿ ಶಶಿಕುಮಾರ್ ತಿಳಿಸಿದರು.