ಕರ್ನಾಟಕ

karnataka

ಹಂತ ಹಂತವಾಗಿ ಸಮಸ್ಯೆಗಳ ಪರಿಹಾರದ ಭರವಸೆ: ಚಿತ್ರರಂಗದ ಗಣ್ಯರ ಜೊತೆ ಡಿಸಿಎಂ ಚರ್ಚೆ

By

Published : Sep 10, 2020, 10:48 PM IST

ಚಿತ್ರರಂಗದ ಪ್ರಮುಖರ ಜತೆ ಉಪಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಗುರುವಾರ ಚರ್ಚೆ ನಡೆಸಿದರು. ಪ್ರತಿಯೊಂದು ಬೇಡಿಕೆ ಈಡೇರಿಕೆಯ ಸಾಧಕ-ಬಾಧಕವನ್ನು ಮುಕ್ತವಾಗಿ ಪರಿಶೀಲಿಸಿದರು.

DCM meeting with Kannada film industry elite
ಡಿಸಿಎಂ ಸಭೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಇಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರನ್ನು ಭೇಟಿಯಾಗಿ, ಚಿತ್ರರಂಗದ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಮನವಿ ಮಾಡಿದ್ದಾರೆ.

ಕೋವಿಡ್​ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗದ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರವು, ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ನಿರ್ಧರಿಸಿದೆ. ಚಿತ್ರರಂಗದ ಪ್ರಮುಖರು ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಬುಧವಾರ ಚರ್ಚೆ ನಡೆಸಿದ್ದರು. ಆ ವೇಳೆ ಎಲ್ಲ ಸಮಸ್ಯೆಗಳ ಮಾಹಿತಿ ಪಡೆದಿದ್ದ ಸಿಎಂ, ಈ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ರಚನಾತ್ಮಕ ಮಾತುಕತೆ ನಡೆಸುವಂತೆ ಉಪಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣಗೆ ಸೂಚಿಸಿದ್ದರು. ಅದರಂತೆ ಚಿತ್ರರಂಗದ ಪ್ರಮುಖರ ಜತೆ ಗುರುವಾರ ಚರ್ಚೆ ನಡೆಸಿದರಲ್ಲದೆ, ಪ್ರತಿಯೊಂದು ಬೇಡಿಕೆ ಈಡೇರಿಕೆಯ ಸಾಧಕ-ಬಾಧಕವನ್ನು ಮುಕ್ತವಾಗಿ ಪರಿಶೀಲಿಸಿದರು.

ಚಿತ್ರರಂಗದ ಗಣ್ಯರ ಜೊತೆ ಡಿಸಿಎಂ ಚರ್ಚೆ

ಈ ಬೇಡಿಕೆಗಳಲ್ಲಿ ಕೆಲವು ಕಾರ್ಮಿಕ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಆದಷ್ಟು ಇವೆರಡೂ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಿತ್ರನಗರಿ ನಿರ್ಮಾಣ, ಕಾರ್ಮಿಕರ ಸಮಸ್ಯೆಗಳು, ಚಿತ್ರೀಕರಣದಲ್ಲಿ ಪ್ರಾಣಿಗಳನ್ನು ಬಳಕೆ ಬಿಕ್ಕಟ್ಟು, ಡಿಐ-ವಿಎಫ್‌ಎಕ್ಸ್‌ ಉದ್ಯಮಕ್ಕೆ ವಿದ್ಯುತ್‌ ಶುಲ್ಕ ವಿನಾಯಿತಿ, ಸಿನಿಮಾ ತೆರಿಗೆ, ಸಕಾಲ ವ್ಯವಸ್ಥೆ, ನಿರ್ಮಾಪಕರಿಗೆ ಜಿಎಸ್‌ಟಿ ವಾಪಸ್‌ ನೀಡುವುದು, ಪೈರಸಿ ನಿಗ್ರಹ, ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಚಿತ್ರರಂಗದ ಅಧಿಕೃತ ಸಂಸ್ಥೆಯನ್ನಾಗಿ ಘೋಷಿಸುವುದು, ನೂತನ ಚಲನಚಿತ್ರ ನೀತಿ ರೂಪಿಸುವುದು, ಲಾಕ್‌ಡೌನ್‌ ವೇಳೆಯಲ್ಲಿ ಥಿಯೇಟರ್​ಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ, ವಿದ್ಯುತ್‌ ಶುಲ್ಕ ಮನ್ನಾ, ಸಕಾಲಕ್ಕೆ ಸಬ್ಸಿಡಿ ನೀಡಿಕೆ ಸೇರಿದಂತೆ ಚಿತ್ರರಂಗದ ಗಣ್ಯರು ಮುಂದಿಟ್ಟ ಬೇಡಿಕೆಗಳ ಬಗ್ಗೆ ಉಪ ಮುಖ್ಯಮಂತ್ರಿ ಕೂಲಂಕುಶವಾಗಿ ಆಲಿಸಿದ್ದಾರೆ.

ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್‌ ಹಾಗೂ ನಮ್ಮ ನೆರೆ ಹೊರೆಯ ಭಾಷೆಗಳ ಚಿತ್ರರಂಗಗಳಂತೆ ಬೆಳೆಯುವ ಎಲ್ಲ ರೀತಿಯ ಶಕ್ತಿಯೂ ಇದೆ. ಅದಕ್ಕೆ ಬೇಕಾದ ಎಲ್ಲ ಪೂರಕ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ. ಈ ಬಗ್ಗೆ ಮುಖ್ಯಮಂತ್ರಿ ಅತೀವ ಆಸಕ್ತಿ ಹೊಂದಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.

ಇದಲ್ಲದೆ‌ ಚಿತ್ರರಂಗ ಸಿನಿಮಾಗಳ ಪೈರಸಿ ಬಗ್ಗೆ ತೀವ್ರ ಆತಂಕವನ್ನು ಹೊಂದಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಇಡೀ ಚಿತ್ರರಂಗಕ್ಕೆ ಸೈಬರ್‌ ಸೆಕ್ಯೂರಿಟಿ ಖಾತ್ರಿ ಕೊಡಲು ಸಿದ್ಧವಾಗಿದೆ. ಅತ್ಯುತ್ತಮ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬರುತ್ತಿದ್ದು, ಅವುಗಳನ್ನು ಆಗಂತುಕರು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಬಿಡುತ್ತಿರುವುದರಿಂದ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಇದಕ್ಕೆ ಚರಮಗೀತೆ ಹಾಡುವ ನಿಟ್ಟಿನಲ್ಲಿ ನಮ್ಮ ಸೈಬರ್‌ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಡಿಸಿಎಂ ಚಿತ್ರರಂಗದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ABOUT THE AUTHOR

...view details