ರಾಜ್ಯಾದ್ಯಂತ ವಿವಿಧ ಜಿಲ್ಲೆಯಿಂದ ಡಿ ಕಂಪನಿ ಸದಸ್ಯರು ಸೇರಿ ಇಂದು ಬೆಂಗಳೂರಿನ UCPE ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿದ್ದರು. ಈ ಪಂದ್ಯಾವಳಿ ಉದ್ಘಾಟನೆಗೆ ನಟ ದರ್ಶನ್ ಅವರನ್ನೇ ಆಹ್ವಾನಿಸಲಾಗಿತ್ತು. ತಮ್ಮ ತಮ್ಮ ತಂಡಗಳಿಗೆ ಅಭಿಮಾನಿಗಳು ದರ್ಶನ್ ಸಿನಿಮಾ ಹೆಸರನ್ನೇ ಇರಿಸಿಕೊಂಡಿದ್ದು ವಿಶೇಷವಾಗಿತ್ತು. ಒಟ್ಟು ಹತ್ತು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದು DPL ( Darshan Premier League) ಕಪ್ಗಾಗಿ ಸೆಣಸಾಡುತ್ತಿವೆ.
DPL-2 ಉದ್ಘಾಟಿಸಿದ ಡಿ-ಬಾಸ್.. ತಾಯಿಗೆ ನಿತ್ಯ ವಿಷ್ ಮಾಡಿ.. ಪ್ರತಿದಿನವೂ ಮದರ್ಸ್ ಡೇ ಅಂದ್ರು ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಡಿ ಕಂಪನಿ' ಎಂಬ ಅಭಿಮಾನಿ ಸಂಘ ಕಟ್ಟಿಕೊಂಡಿರುವ ಅಭಿಮಾನಿಗಳು ಆ ಮೂಲಕ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಟೂರ್ನಮೆಂಟ್ ನಡೆಯುತ್ತಿದ್ದ ಗ್ರೌಂಡ್ಗೆ ಆಗಮಿಸಿದ ದರ್ಶನ್ ಎಲ್ಲಾ ತಂಡಗಳ ಜೊತೆ ಫೋಟೋಗೆ ಫೋಸ್ ಕೊಟ್ಟು ಬೆಸ್ಟ್ ಆಫ್ ಲಕ್ ಹೇಳಿದರು. ಅಲ್ಲದೆ ತಾವೇ ಸ್ವತ: ಬ್ಯಾಟ್ ಬೀಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್, ಮನರಂಜನೆ ಬಿಟ್ಟು ನಾನು ಇವರಿಗೆ ಏನೂ ಕೊಡುತ್ತಿಲ್ಲ. ಆದರೆ ಇವರೆಲ್ಲಾ ತಾವೇ ಹಣ ಹಾಕಿ ಈ ಪಂದ್ಯಾವಳಿ ಆಯೋಜಿಸಿದ್ದಾರೆ. ನನಗೆ ಸ್ಟೇಡಿಯಂನಲ್ಲಿ ಕುಳಿತು ಕ್ರಿಕೆಟ್ ನೋಡುವಷ್ಟು ತಾಳ್ಮೆ ಇಲ್ಲ. ನಾನು ಬೇರೆ ಕ್ರೀಡೆಗಳಿಗಿಂತ ಹಾರ್ಸ್ ರೈಡಿಂಗ್ ಹೆಚ್ಚು ಇಷ್ಟಪಡುತ್ತೇನೆ, ಆದರೂ ನನಗೆ ಸಚಿನ್ ತೆಂಡುಲ್ಕರ್ ಮೆಚ್ಚಿನ ಕ್ರಿಕೆಟಿಗ ಎಂದು ಹೇಳಿದರು.
'ಮದರ್ಸ್ ಡೇ' ಬಗ್ಗೆ ಮಾತನಾಡಿದ ದರ್ಶನ್ ಇದೊಂದು ದಿನ ಅಮ್ಮಂದಿರಿಗೆ ವಿಶ್ ಮಾಡಿದರೆ ಸಾಲದು. ಪ್ರತಿ ದಿನವೂ ಅವರ ದಿನವೇ. ನಮ್ಮನ್ನು ಹೆತ್ತು, ಸಲಹಿ ಇಷ್ಟು ದೊಡ್ಡವರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ಅಲ್ಲದೆ ಆಟಗಾರರಿಗೆ ದಯವಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳದೆ ಆಟವಾಡಿ ಎಂದು ಕಾಲೆಳೆದರು.