ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬೆಳಗ್ಗೆ 6 ರಿಂದ ಭರ್ಜರಿ ಪ್ರದರ್ಶನ ಕೂಡಾ ಕಾಣುತ್ತಿದೆ. ಆದರೆ ದರ್ಶನ್ ಅಭಿಮಾನಿಗಳ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡಿರುವ ಥಿಯೇಟರ್ ಮಾಲೀಕರು ಪೇಕ್ಷಕರಿಂದ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.
ದೊಡ್ಡಬಳ್ಳಾಪುರ ನಗರದ ರಾಜ್ಕಮಲ್ ಥಿಯೇಟರ್ನಲ್ಲಿ 'ಯಜಮಾನ' ಸಿನಿಮಾ ಬಿಡುಗಡೆಯಾಗಿದ್ದು, ಬೆಳಗ್ಗೆ 6 ರಿಂದ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಮುಂದೆ ಪಟಾಕಿ ಹೊಡೆದು ದರ್ಶನ್ ಕಟೌಟ್ಗಳಿಗೆ ಹಾಲಿನ ಅಭಿಷೇಕ ಮಾಡಿ ದರ್ಶನ್ ಅಭಿಮಾನಿಗಳು ಸಂಭ್ರಮ ಪಟ್ಟರೆ, ಥಿಯೇಟರ್ ಮಾಲೀಕರು ಮಾತ್ರ ಪೇಕ್ಷಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾಗಳಿಗೆ ಸರ್ಕಾರದಿಂದ ಶೇ. 100 ರಷ್ಟು ತೆರಿಗೆ ವಿನಾಯಿತಿ ಇದ್ದು, ಬಾಲ್ಕನಿ ಪ್ರದಶನಕ್ಕೆ 80 ರೂಪಾಯಿ ಇದ್ದರೆ, ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆ 60 ರೂಪಾಯಿ ಮಾತ್ರ. ಆದರೆ ರಾಜ್ಕಮಲ್ ಥಿಯೇಟರ್ ಮಾಲೀಕ ಪೇಕ್ಷಕರಿಂದ ಹಗಲು ದರೋಡೆ ಮಾಡುತ್ತಿದ್ದು, 60 ಮತ್ತು 80 ರೂಪಾಯಿ ಟಿಕೆಟ್ ಮೇಲೆ 100 ಮತ್ತು 120 ಬೆಲೆಯನ್ನು ಸೀಲ್ ಹೊಡೆದು ಮಾರುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.