ಇಂದು ವರನಟ ಡಾ. ರಾಜ್ಕುಮಾರ್ ಅವರ 91ನೇ ವರ್ಷದ ಹುಟ್ಟುಹಬ್ಬ. ಡಾ. ರಾಜ್ ಕುಟುಂಬ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ರಾಜ್ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದರು.
ಅಮೆರಿಕ ಪ್ರವಾಸದಲ್ಲಿರುವ ಪುನೀತ್ ರಾಜ್ಕುಮಾರ್ ಅಪ್ಪಾಜಿಯನ್ನು ನೆನೆದು ತಮ್ಮ ಟ್ವಿಟರ್ನಲ್ಲಿ ಡಾ. ರಾಜ್ ಧ್ವನಿ ಇರುವ ಅಪರೂಪದ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಸಾಕಷ್ಟು ಗಣ್ಯರು ಕೂಡಾ ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಕನ್ನಡ ಕಣ್ಮಣಿಯನ್ನು ಸ್ಮರಿಸಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಕೂಡಾ ಟ್ವಿಟರ್ನಲ್ಲಿ ಡಾ. ರಾಜ್ಕುಮಾರ್ ಅವರ ಗುಣಗಾನ ಮಾಡಿದ್ದಾರೆ.
'ನಲ್ಮೆಯ ಅಣ್ಣಾವ್ರು ನಟಸಾರ್ವಭೌಮ ಡಾ. ರಾಜಣ್ಣನವರಿಗೆ ಹುಟ್ಟುಹಬ್ಬದ ದಿನದಂದು ಹೃದಯಪೂರ್ವಕ ನಮನಗಳು. ಅವರ ಚಿತ್ರಗಳು, ನಡೆದು ಬಂದ ದಾರಿ, ಆದರ್ಶಗಳು ಸದಾ ಸ್ಫೂರ್ತಿದಾಯಕವಾಗಿರುತ್ತದೆ' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
'ಈ ದಿನ ನಿಜಕ್ಕೂ ಮರೆಯಲಾಗದು. ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರೋ ದೊಡ್ಡ ಲೆಜೆಂಡ್. ಸಿನಿಮಾ ರಂಗ ಇರುವವವರೆಗೂ ಈ ದಿನ ಮರೆಯಲು ಸಾಧ್ಯವೇ ಇಲ್ಲ. ಅಂತಹ ಮೇರು ನಟನ ಜನ್ಮ ದಿನವಿಂದು. ವ್ಯಕ್ತಿತ್ವ, ಅದ್ಭುತ ಕಾರ್ಯಗಳಿಂದಲೇ ಅಮರತ್ವ ಪಡೆದ ಮಹಾನ್ ಚೇತನ ವರನಟ ಡಾ. ರಾಜ್ಕುಮಾರ್ ಸರ್. ಈ ದಿನ ನಿಜಕ್ಕೂ ನಾಡಿನ ಕೋಟ್ಯಂತರ ಅಭಿಮಾನಿಗಳು ಹಾಗೂ ಕುಟುಂಬದಲ್ಲಿ ದೊಡ್ಡ ಹಬ್ಬದ ಸಂಭ್ರಮ ತಂದಿದೆ' ಎಂದು ಕಿಚ್ಚ ಸುದೀಪ್ ಟ್ಟೀಟ್ ಮಾಡಿದ್ದಾರೆ.