ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿ, ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಪ್ರಮೋದ್. ನಂತರ ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ, ರತ್ನನ್ ಪ್ರಪಂಚ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ನಟನೆಯ ಕೆಲವು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಈಗ 'ಅಲಂಕಾರ್ ವಿದ್ಯಾರ್ಥಿ' ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾ ಮಾಡ್ತಾ ಇದ್ದಾರೆ. ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರದ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ, ಈ ಸಿನಿಮಾದ ಮುಹೂರ್ತ ಮಾಡಲಾಯಿತು. ಈ ಚಿತ್ರದಕ್ಕೆ ಡಾಲಿ ಧನಂಜಯ ಮುಖ್ಯ ಅತಿಥಿಯಾಗಿ ಬಂದು, ಕ್ಲಾಪ್ ಮಾಡುವ ಮೂಲಕ ಸ್ನೇಹಿತನ ಚಿತ್ರಕ್ಕೆ ಶುಭ ಕೋರಿದರು.
ಅಲಂಕಾರ್ ವಿದ್ಯಾರ್ಥಿ.. ಇದು 70-80ರ ದಶಕದಲ್ಲಿ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದ ರೀತಿ. ನಮ್ಮ ಸಿನಿಮಾದಲ್ಲಿ ಹೀರೋ ಕೂಡಾ ಹಾಗೇ. ಓದು ತಲೆಗೆ ಹತ್ತದಿದ್ದರೂ ಅಲಂಕಾರಕ್ಕಾಗಿ ಕಾಲೇಜಿಗೆ ಬರುತ್ತಿರುತ್ತಾನೆ. ಆದರೂ ಕಾಲೇಜಿನಲ್ಲಿ ಪಾಠ ಮಾಡುವ ಗುರುಗಳಿಂದ ಹಿಡಿದು ಎಲ್ಲರಿಗೂ ಇವನೆಂದರೆ ಒಂಥರಾ ಮುದ್ದು. ಲಾಸ್ಟ್ ಬೆಂಚಲ್ಲೇ ಓದಿಕೊಂಡಿದ್ದವನು ಕಾಲೇಜಿಗೆ ಹೇಗೆ ಸೇರುತ್ತಾನೆ? ಪ್ರಿನ್ಸಿಪಾಲ್ ಜೊತೆ ಆತನ ಕಮ್ಯುನಿಕೇಷನ್ ಯಾವ ರೀತಿ ಇರುತ್ತದೆ? ಅವನ ತಂದೆ ತಾಯಿ, ಅವನಿಗೆ ಸಿಗುವ ಸ್ನೇಹಿತರು, ಜೊತೆಯಾಗುವ ಹುಡುಗಿಯ ಸುತ್ತ ಕತೆ ತೆರೆದುಕೊಳ್ಳುತ್ತದೆ. ಪಾಸಾಗಿರುವ ಹುಡುಗನಿಗೆ ಬೇಸಿಗೆ ಕಾಲದಲ್ಲಿ ಮಾತ್ರ ರಜೆ ಸಿಗುತ್ತದೆ. ಅದೇ ಫೇಲಾಗಿ ಎರಡು ವರ್ಷ ಕಾಲ ಕಳೆದವನು ಬೇಸಿಗೆ, ಮಳೆ, ಚಳಿ ಮೂರೂ ಸೀಜನ್ನಲ್ಲಿ ಮನೇಲೇ ಇರ್ತಾನೆ. ಇಂಥಾ ಹುಡುಗ ಮ್ಯಾನೇಜ್ ಮೆಂಟ್ ಸೀಟ್ ತಗೊಂಡು ಕಾಲೇಜಿಗೆ ಬರ್ತಾನೆ. ಈತನ ಬದುಕು ಹೇಗಿರುತ್ತದೆ ಅನ್ನೋದೇ ಅಲಂಕಾರ್ ವಿದ್ಯಾರ್ಥಿ ಚಿತ್ರದ ತಿರುಳು.
ಚೊಚ್ಚಲ ನಿರ್ದೇಶನ:
ಅಲಂಕಾರ್ ವಿದ್ಯಾರ್ಥಿ ಅಂದರೆ ಏನು ಅನ್ನೋದು ಹಲವರ ಪ್ರಶ್ನೆಯಾಗಿತ್ತು. ಇದಕ್ಕೆ ಉತ್ತರ ನೀಡಲೆಂದೇ ವಿಶೇಷ ಪೋಸ್ಟರ್ ಅನಾವರಣ ಮಾಡಿದ್ದೇವೆ. ʻʻಈ ಕೆಳಗೆ ನಮೂದಿಸಿರುವ ವ್ಯಕ್ತಿಯು ತನ್ನ ತಾಯಿಯ ಸಹಾಯದಿಂದ ಪಾಸಾದ.ʼʼ ಎಂದು ಪೋಸ್ಟರಿನಲ್ಲಿ ಹೇಳಲಾಗಿದೆ. ತಾಯಿ-ಮಗ ಪಾಸ್ ಆಗುವುದಕ್ಕೆ ಯಾವ ರೀತಿ ಸಹಾಯ ಮಾಡುತ್ತಾಳೆ ಅನ್ನೋದು ಚಿತ್ರದಲ್ಲಿದೆ. ಇಡೀ ಸಿನಿಮಾದಲ್ಲಿ ಸಂಭಾಷಣೆ ಪ್ರಾಮುಖ್ಯತೆ ಪಡೆಯುತ್ತದೆ ಎಂಬಿತ್ಯಾದಿ ವಿವರಗಳನ್ನು ನಿರ್ದೇಶಕ ಕೇಶವ್ ಎಸ್ ಇಂಡಲವಾಡಿ ಕೇಶವ್ ಎಸ್ ಇಂಡಲವಾಡಿ ನೀಡಿದರು.
ಶಾಲಾ ಕಾಲೇಜು ದಿನಗಳಿಂದಲೂ ಸ್ಕಿಟ್, ಶಾರ್ಟ್ ಫಿಲ್ಮ್ ಗಳಲ್ಲಿ ತೊಡಗಿಸಿಕೊಂಡಿದ್ದ ಕೇಶವ್ ಎಸ್ ಇಂಡಲವಾಡಿ 2015ರಲ್ಲಿ ದೊರೈ ಭಗವಾನ್ ಅವರ ಬಳಿ ನಿರ್ದೇಶನದ ಕೋರ್ಸು ಮುಗಿಸಿದವರು. ನಂತರ ಸಿಂಪಲ್ ಸುನಿ ಅವರೊಂದಿಗೆ ʻಆಪರೇಷನ್ ಅಲಮೇಲಮ್ಮʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕಳೆದ ಒಂದು ವರ್ಷದಿಂದ ಕೂತು ಕತೆ ಸಿದ್ಧಪಡಿಸಿ ಈಗ ಚೊಚ್ಚಲ ನಿರ್ದೇಶನ ಆರಂಭಿಸಿದ್ದಾರೆ.