ಮೈಸೂರು: ‘ದೃಶ್ಯ’ ಸಿನಿಮಾ ನಂತರ ಸಿನಿಮಾದಲ್ಲಿ ನಟನೆಯಿಂದ ದೂರ ಸರಿದು, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.
ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕ್ರೇಜಿಸ್ಟಾರ್.. ಯಾವ ಸಿನಿಮಾ ಗೊತ್ತಾ? - undefined
ಕ್ರೇಜಿಸ್ಟಾರ್ ರವಿಚಂದ್ರನ್ ಶೀಘ್ರದಲ್ಲೇ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನ ರಾಮಕೃಷ್ಣನಗರದ ಮಂಡ್ಯ ರಮೇಶ್ ಅವರ ರಂಗಭೂಮಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕ್ರೇಜಿಸ್ಟಾರ್ ಶೀಘ್ರದಲ್ಲೇ ಮಲ್ಲ-2 ಸಿನಿಮಾ ಮಾಡುವುದಾಗಿ ಹೇಳಿದರು.
ತಮ್ಮ ಸಿನಿಮಾಗಳ ಮೂಲಕ ಯುವಸಮೂಹವನ್ನು ತನ್ನತ್ತ ಸೆಳೆದಿದ್ದ ರವಿಮಾಮ ‘ದೃಶ್ಯ‘ ಸಿನಿಮಾ ನಂತರ ಇಲ್ಲಿಯವರೆಗೂ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅಲ್ಲದೆ ಪುತ್ರಿ ಗೀತಾಂಜಲಿ ಮದುವೆ ಸಮಾರಂಭದಲ್ಲಿ ಕೂಡಾ ಅವರು ಬ್ಯುಸಿ ಇದ್ದರು. ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಇದೀಗ ರವಿಚಂದ್ರನ್ ಮತ್ತೆ ಬಣ್ಣ ಹಚ್ಚಲು ಉತ್ಸಾಹ ತೋರಿದ್ದಾರೆ.
ನಿನ್ನೆ ರಾಮಕೃಷ್ಣನಗರದಲ್ಲಿರುವ ನಟನ ರಂಗಮಂಟಪದಲ್ಲಿ ನಡೆದ 'ಚೋರ ಚರಣದಾಸ' 250ನೇ ಪ್ರಯೋಗದ ನಾಟಕವನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು. ಕಲಾವಿದರು ಸದಾ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಬೇಕು ಎಂದು ನನ್ನ ಪತ್ನಿ ಹೇಳುತ್ತಿರುತ್ತಾರೆ. ನಾನೂ ಕೂಡಾ ಸಿನಿಮಾಗೆ ರೆಡಿಯಾಗುತ್ತಿದ್ದೇನೆ. ‘ಮಲ್ಲ-2’ ಸಿನಿಮಾ ಮಾಡಬೇಕು ಅಂದುಕೊಂಡಿದ್ದೀನಿ. ಸಿನಿಮಾದಲ್ಲಿ ಸೋಲು,ಗೆಲುವು ಸಹಜ ಆದರೆ ಅದರಿಂದ ಕುಗ್ಗಬಾರದು. ಒಂದು ವೇಳೆ 'ಪ್ರೇಮಲೋಕ' ಸಿನಿಮಾ ಬರದಿದ್ದಲ್ಲಿ ನಾನು ಯಾರು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ ಎಂದರು. ಇನ್ನು ಮಂಡ್ಯ ರಮೇಶ್ ಬಗ್ಗೆ ಮಾತನಾಡಿದ ಅವರು ರಮೇಶ್ ಸ್ವತ: ಒಬ್ಬರು ಕಲಾವಿದರಾಗಿ ಬೇರೆ ಕಲಾವಿದರನ್ನು ಬೆಳೆಸುತ್ತಿದ್ದಾರೆ ಎಂದು ಹೊಗಳಿದರು.