ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದ್ದು, ಈ ಕೊಂಡಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜೊತೆಗೆ ಮಾಲ್, ಚಿತ್ರಮಂದಿರ ಹಾಗೂ ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇದರಲ್ಲಿ ಕನ್ನಡ ಚಿತ್ರರಂಗ ಕೂಡ ಹೊರತಾಗಿಲ್ಲ. ಸದ್ಯಕ್ಕೆ ಕನ್ನಡದ ಸ್ಟಾರ್ ನಟರ ಸಿನಿಮಾಗಳ ಮೇಲೆ ಕೊರೊನಾ ಕರಿನೆರಳು ಆವರಿಸಿದೆ.
ಕೊರೊನಾದ ಎಫೆಕ್ಟ್ ಚಿತ್ರೀಕರಣಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ ಹೊಸಬರ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಟಾರ್ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಚಿತ್ರೀಕರಣವನ್ನು ಮುಂದಕ್ಕೆ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಲಗಾಮ್' ಸಿನಿಮಾ ಸರಳವಾಗಿ ಸೆಟ್ಟೇರಿತ್ತು. ನಿರ್ದೇಶಕ ಕೆ ಮಾದೇಶ ಪ್ಲಾನ್ ಪ್ರಕಾರ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ಆದರೆ, ಕೊರೊನಾ ಹೆಚ್ಚಾದ ಕಾರಣ 'ಲಗಾಮ್' ಚಿತ್ರದ ಶೂಟಿಂಗ್ ಮುಂದೂಡಲಾಗಿದೆ.
ಹಾಗೆ ಆರ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಕೂಡ ಸದ್ಯಕ್ಕೆ ಸ್ಥಗಿತಗೊಂಡಿದೆ. ಕಬ್ಜ ಸಿನಿಮಾಗಾಗಿ ಮಿನರ್ವ ಮಿಲ್‌ನಲ್ಲಿ ಕೊಟ್ಯಂತರ ರೂ. ಖರ್ಚು ಮಾಡಿ ಅದ್ಧೂರಿ ಸೆಟ್ ಹಾಕಲಾಗಿತ್ತು. ಅದೇ ಸೆಟ್ನಲ್ಲಿ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಸಹ ನಡೆಯುತ್ತಿತ್ತು. ಆದರೆ, ಈಗ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿರುವುದರಿಂದ ಚಿತ್ರದ ನಿರ್ದೇಶಕರು ಗೊಂದಲದಲ್ಲಿದ್ದಾರೆ. ಹೀಗಾಗಿ ಉಪೇಂದ್ರ ಫ್ಯಾಮಿಲಿ ಜೊತೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಇನ್ನು 'ಯುವರತ್ನ' ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟ ಪುನೀತ್ ರಾಜ್ಕುಮಾರ್ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಕರ್ಫ್ಯೂ ಹೇರಿದ್ದರಿಂದ ಈ ಸಿನಿಮಾದ ಚಿತ್ರೀಕರಣವನ್ನು ಸಹ ನಿಲ್ಲಿಸಲಾಗಿದೆ. ಚಿತ್ರತಂಡದ ಆರೋಗ್ಯದ ದೃಷ್ಟಿಯಿಂದ ಚಿತ್ರೀಕರಣವನ್ನ ಮುಂದೂಡಲಾಗಿದೆ. ಈ ಸಂಕಷ್ಟದ ಕಾಲ ಕಳೆದ ಮೇಲೆ ನಮ್ಮ ಕೆಲಸ ಶುರುವಾಗಲಿದೆ ಅಂತಾರೆ ನಿರ್ದೇಶಕ ಚೇತನ್ ಕುಮಾರ್. ಈ ಕಡೆ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಪವರ್ ಸ್ಟಾರ್ ಹೊಸ ಸಿನಿಮಾಗಳು ಕಥೆ ಕೇಳೋದು ಹಾಗೂ ತಮ್ಮ ಪಿಆರ್ಕೆ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಥೆ ಆಯ್ಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಕುಟುಂಬದ ಜೊತೆ ಎಂಜಾಯ್ ಮಾಡುತ್ತಿದ್ದಾರೆ.
ಕಂಚಿನ ಕಂಠದಿಂದಲೇ ಚಂದನವನದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ವಸಿಷ್ಠ ಸಿಂಹಗೂ ಈ ಕೊರೊನಾ ದಾರಿ ಮಾಡಿಕೊಟ್ಟಿಲ್ಲ. ಸದ್ಯ 'ಕಾಲಚಕ್ರ' ಸಿನಿಮಾ ಸೇರಿದಂತೆ 'ತಲ್ವಾಲ್', ತೆಲುಗಿನ 'ಒಡೆಲ್ ರೈಲ್ವೆ ಸ್ಟೇಷನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆದರೆ, ಕೊರೊನಾ ಕಾರಣದಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ದಾರೆ. ರಾಜ್ಯ ಸರ್ಕಾರ ಕರ್ಫ್ಯೂ ಹೊರಡಿಸುವುದಕ್ಕಿಂತಲೂ ಮೊದಲು 'ತಲ್ವಾರ್' ಸಿನಿಮಾವನ್ನು ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಸೋಂಕಿತರ ಸಂಖ್ಯೆ ಹಚ್ಚಾಗುತ್ತಿರುವುದರಿಂದ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದೇವೆ. ಹಾಗಾಗಿ ಎಲ್ಲರೂ ಮನೆಯಲ್ಲಿ ಇರುವಂತಾಗಿದೆ ಎನ್ನುತ್ತಾರೆ ಕಂಚಿನ ಕಂಠದ ಕುವರ ವಸಿಷ್ಠ ಸಿಂಹ.