ಬೆಂಗಳೂರು: ಯೋಗರಾಜ್ ಭಟ್ಟರು ಈ ಹಿಂದೆ ಕೆಲವು ಸಮಾಜಮುಖಿ ಗೀತೆಗಳನ್ನು ರಚಿಸಿದ್ದು, ಈಗ ದೇಶವನ್ನು ಆವರಿಸಿರುವ ಕೊರೊನಾ ವೈರಸ್ ಬಗ್ಗೆಯೂ ಒಂದು ಹಾಡಿನ ಚಿತ್ರೀಕರಣವನ್ನು ಕರ್ನಾಟಕ ಸರ್ಕಾರಕ್ಕೆ ನೀಡುತ್ತಿದ್ದಾರೆ.
ಭಾನುವಾರ ಮಾಧ್ಯಮದವರನ್ನು ಸೇರಿಸಿಕೊಂಡು ಫ್ರೀಡಮ್ ಪಾರ್ಕ್ನಲ್ಲಿ ಚಿತ್ರೀಕರಣ ಮಾಡಿದರು. 'ಯಾರೋ ನೀನು ಮಾನವ ಕೇಳುತಿಹುದು ಕೊರೊನಾ' ಎಂಬ ಹಾಡಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ವಿಭಾಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಗೀತೆಯನ್ನು ಪ್ರಮುಖವಾಗಿ ವೈದ್ಯರು, ಪೊಲೀಸರು, ಬಿಬಿಎಂಪಿ ಅಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರು ಹಗಲಿರುಳು ಶ್ರದ್ಧೆಯಿಂದ ಸೇವೆ ಮಾಡುತ್ತಿರುವವರಿಗೆ ಅರ್ಪಿಸಲಾಗಿದೆ. ಇವರೆಲ್ಲರ ಜೊತೆಗೆ ಸುಧಾ ಮೂರ್ತಿ ಸಹ ಈ ಗೀತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಶ್ರೀಮಂತರು ದುಡ್ಡನ್ನು ಏನು ಮಾಡಬೇಕು ಮತ್ತು ಬಡವರು ಒಪ್ಪತ್ತಿನ ಊಟಕ್ಕೆ ಕಷ್ಟ ಅನುಭವಿಸುತ್ತಿರುವಾಗ ಎಂಬ ವಿಚಾರ ಸಹ ಈ ಹಾಡಿನಲ್ಲಿದೆ. ಇದು ಆತ್ಮ ವಿಮರ್ಶೆಯ ಸಮಯ ಎಂಬುದು ಭಟ್ಟರ ತಾತ್ಪರ್ಯವಾಗಿದೆ.
ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ಹಾಗೂ ಅರ್ಜುನ್ ಜನ್ಯ ರಾಗ ಸಂಯೋಜನೆ ಇದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಅಲ್ಲಿ ಯೋಗರಾಜ್ ಭಟ್ಟರು ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ವಿಡಿಯೋ ಹಾಡು ಎಲ್ಲರನ್ನು ತಲುಪಲಿದೆ.