ಬೆಂಗಳೂರು: ಕೋಲುಮಂಡೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ರ್‍ಯಾಪರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ವಿರುದ್ಧ ಮಲೆ ಮಹಾದೇಶ್ವರ ಭಕ್ತರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡು ಕಾನೂನು ತಜ್ಞರ ಸಲಹೆ ಪಡೆದು ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಗಣೇಶ ಹಬ್ಬದಂದು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದ ಕೋಲುಮಂಡೆ ಹಾಡಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ. ಹಾಗೂ ಚಂದನ್ ತಮ್ಮ ಲಾಭಕ್ಕಾಗಿ ಮಲೆ ಮಹದೇಶ್ವರನ ಈ ಸುಂದರ ಹಾಡನ್ನು ಹಾಳು ಮಾಡಿ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಎಂದು ಮೈಸೂರು ಹಾಗೂ ಚಾಮರಾಜನಗರ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಪೋಸ್ಟ್ಗಳನ್ನು ನೋಡುತ್ತಿದ್ದಂತೆ ಚಂದನ್ ಶೆಟ್ಟಿ ಯೂಟ್ಯೂಬ್ನಿಂದ ಹಾಡನ್ನು ಡಿಲೀಟ್ ಮಾಡಿ ಜನರಿಗೆ ಕ್ಷಮೆ ಕೋರಿದ್ದಾರೆ. ಆನಂದ್ ಆಡಿಯೋ ಸಂಸ್ಥೆ ಹೊರ ತಂದಿದ್ದ ಈ ಹಾಡನ್ನು ಸುಮಾರು 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು.
ಚಂದನ್ ಶೆಟ್ಟಿ ಈಗ ಹಾಡನ್ನು ಡಿಲೀಟ್ ಮಾಡಿರುವುದರಿಂದ ಪೊಲೀಸರು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.