ಧರ್ಮಣ್ಣ, ಸದ್ಯ ಚಂದನವನದಲ್ಲಿ ಬಹು ಬೇಡಿಕೆ ನಟ. ವಿಭಿನ್ನ ಪಾತ್ರಗಳ ಮೂಲಕ ಮೂಲಕ ಪುನೀತ್ ರಾಜ್ಕುಮಾರ್, ದರ್ಶನ್, ಗಣೇಶ್ ಹೀಗೆ ದೊಡ್ಡ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡವರು. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಈ ಕಲಾವಿದ ಬಣ್ಣದ ಲೋಕಕ್ಕೆ ಬಂದಿದ್ದೇ ಒಂದು ರೋಚಕ ಕಥೆ. ಕೃಷಿ ಕುಟುಂಬದ ಈ ಹಳ್ಳಿ ಪ್ರತಿಭೆ ಮುಂದೊಂದು ದಿನ ತಾನು ನಟನಾಗುತ್ತೇನೆ ಎಂದು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಇವರಲ್ಲಿರುವ ಪ್ರತಿಭೆ ಕಾಲೇಜ್ ದಿನಗಳಲ್ಲಿ ಅನಾವರಣಗೊಳ್ಳುತ್ತೆ. ಪಿ.ಲಂಕೇಶ್ ಅವರ 'ತೆರೆಗಳು', 'ಕುವೆಂಪು' ಅವರ ಕಲ್ಕಿ ಹೀಗೆ ನಾಟಕಗಳಲ್ಲಿ ಅಭಿನಯಿಸುತ್ತ ಕಲೆಯ ಗೀಳು ಹಚ್ಚಿಕೊಳ್ಳುತ್ತಾರೆ. ಹೀಗೆ ಪ್ರಾರಂಭವಾದ ಇವರ ಅಭಿನಯದ ಪಯಣ ಇಂದು ಕನ್ನಡ ಚಿತ್ರರಂಗಕ್ಕೆ ತಂದು ನಿಲ್ಲಿಸಿದೆ.
ಅಭಿನಯಾಸಕ್ತಿ ಜತೆಗೆ ಓದಿನಲ್ಲಿ ಇವರಿಗೆ ಒಲವು ಜಾಸ್ತಿ. ಆದ್ರೆ ಹಣದ ಕೊರತೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಟೆಲಿಫೋನ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಇದಾದ ನಂತರ ಯಶವಂತ್ ಸರ್ದೇಶಪಾಂಡೆ ಅವರ ನಾಟಕ ತಂಡದಲ್ಲಿ ಟೆಕ್ನಿಶಿಯನ್ ಆಗಿ ಸೇರಿಕೊಳ್ಳುತ್ತಾರೆ. ಇಲ್ಲಿ ಲೈಟ್ಬಾಯ್ ಆಗಿ ಕೆಲಸ ಮಾಡುತ್ತಿದ್ದ ಧರ್ಮಣ್ಣ, ಚಿಕ್ಕ-ಪುಟ್ಟ ಪಾತ್ರಗಳ ಮೂಲಕ ಕಲಾವಿದನ ಪಟ್ಟ ಅಲಂಕರಿಸುತ್ತಾರೆ. ಇಲ್ಲಿಂದಲೇ ಧರ್ಮಣ್ಣ ಅದೃಷ್ಟ ಖುಲಾಯಿಸುತ್ತೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡ ಹಲವು ನಾಟಕಗಳಲ್ಲಿ ಇವರು ನಟಿಸುತ್ತಾರೆ.
ನಾಟಕಗಳಲ್ಲಿ ಬ್ಯುಸಿಯಾಗಿದ್ದ ಇವರು 'ರಾಮಾ ರಾಮಾ ರೇ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಾರೆ. ಅವರ ಈ ಆಗಮನಕ್ಕೆ ಈ ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ ಅವರು ಕಾರಣರಾಗುತ್ತಾರೆ. ಈ ಚಿತ್ರದ ಮೊದಲ ದೃಶ್ಯಕ್ಕೆ ಸಾಕಷ್ಟು ಟೇಕ್ ತೆಗೆದುಕೊಂಡ ಧರ್ಮ ಅವರಿಗೆ ಸತ್ಯ ಪ್ರಕಾಶ್ ಬಹಳ ತಾಳ್ಮೆಯಿಂದ ನಟನೆ ಕುರಿತು ಹೇಳಿ, ಧೈರ್ಯ ತುಂಬುತ್ತಾರೆ.
ಉಪೇಂದ್ರ ಜತೆ ಹಾಸ್ಯನಟ ಧರ್ಮಣ್ಣ 'ರಾಮಾ ರಾಮಾ ರೇ' ಸಿನಿಮಾ ನಂತ್ರ ಇವರಿಗೆ ಸಾಲು-ಸಾಲು ಅವಕಾಶಗಳು ಬರುತ್ತವೆ. ಅದು ಎಷ್ಟರ ಮಟ್ಟಿಗೆಯಂದ್ರೆ ಡೇಟ್ ಹೊಂದಾಣಿಕೆ ಆಗದೆ ಕೆಜಿಎಫ್, ಅಮರ್ನಂತಹ ಚಿತ್ರಗಳನ್ನು ಬಿಡ್ತಾರೆ. ಇವರು ಪುನೀತ್ ಜತೆ ಅಂಜನೀಪುತ್ರ, ಗಣೇಶ್ ಜತೆ ಮುಗುಳು ನಗೆ, ದರ್ಶನ್ ಹಾಗೂ ಪ್ರಜ್ವಲ್ ಜತೆ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ನಟಿಸಿದ್ದಾರೆ. ಇದುವರೆಗೆ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಇವರಿಗೆ ಕುಟುಂದವರಿಂದ ಸಾಕಷ್ಟು ಸಪೋರ್ಟ್ ಕೂಡ ಇದೆಯಂತೆ. ಈಟಿವಿ ಭಾರತದ ಜೊತೆ ಧರ್ಮಣ್ಣ ತಮ್ಮ ಸಿನಿ ಪಯಣದ ಅನುಭವ ಹಂಚಿಕೊಂಡಿದ್ದಾರೆ.
'ಈಟಿವಿ ಭಾರತ' ಜತೆ ಧರ್ಮಣ್ಣನ ಮಾತು