ಡಾ.ರಾಜ್ ಕುಮಾರ್ ಸಿನಿಮಾ ನಿರ್ಮಾಪಕರನ್ನು ಅನ್ನದಾತರು ಎಂದು ಕರೆಯುತ್ತಿದ್ದರು. ಕೋಟಿ ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದ ನಿರ್ಮಾಪಕರಿಗೆ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವನ್ನು ಮಾಡಲಾಗಿತ್ತು. ಆದರೆ ಸಂಘದ ಕಾರ್ಯಕ್ರಮಗಳನ್ನು ನಡೆಸಲು ಸ್ವತಃ ಕಟ್ಟಡ ಇಲ್ಲದೆ, ಬಾಡಿಗೆ ಕಟ್ಟಡದಲ್ಲಿ ಸಂಘದ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದರು. ಸುಮಾರು 80 ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಈಗ ಸ್ವಂತ ಕಟ್ಟಡ ಕಟ್ಟುವ ಕಾಲ ಕೂಡಿ ಬಂದಿದೆ.
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಶಂಕು ಸ್ಥಾಪನೆ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ, ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದ ಎದುರಿಗೆ ಜಾಗವನ್ನು ಬರೋಬ್ಬರಿ 10 ಕೋಟಿ ರೂ.ಗಳಲ್ಲಿ ಖರೀದಿಸಲಾಗಿತ್ತು. ಈಗ ಈ ಜಾಗದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಿದ್ದು, ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಸಿಎಂ ಯಡಿಯೂರಪ್ಪ ನೆರವೇರಿಸಿದ್ದಾರೆ.
ಕನ್ನಡ ನಿರ್ಮಾಪಕರ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್ವೈ, ಕನ್ನಡ ಚಿತ್ರರಂಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿರೋದು ಹೆಮ್ಮೆಯ ವಿಷಯ. ಇದರ ಜೊತೆಗೆ ಸದಭಿರುಚಿಯ ಸಿನಿಮಾಗಳನ್ನು ಮಾಡಲಿ ಎಂದು ಸಲಹೆ ನೀಡಿದರು.
ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ತಮ್ಮ ಕಡೆಯಿಂದ ಸಹಾಯ ಮಾಡುವ ಭರವಸೆ ನೀಡಿದರು.
ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರೋ ಪ್ರವೀಣ್ ಕುಮಾರ್ ಮಾತನಾಡಿ, 10 ಕೋಟಿ ರೂ.ಗಳಲ್ಲಿ ಈ ಜಾಗವನ್ನು ಖರೀದಿಸಲಾಗಿದೆ ಮುಂದಿನ ವರ್ಷದಲ್ಲಿ ಇಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಕಟ್ಟಡ ಕಟ್ಟುವುದಾಗಿ ಹೇಳಿದ್ದಾರೆ.
ಓದಿ : 'ವಿಶ್ವದ 50 ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿ'ಯಲ್ಲಿ ಸೋನು ಸೂದ್ಗೆ ಅಗ್ರಸ್ಥಾನ
ಕಾರ್ಯಕ್ರಮದಲ್ಲಿ ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ರಾಮಮೂರ್ತಿ, ಗೌರವ ಕಾರ್ಯದರ್ಶಿ ಕೆ.ಮಂಜು, ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜಯರಾಜ್, ನಟಿ ಹಾಗು ಅರಣ್ಯ ನಿಗಮ ಮಂಡಳಿ ಅಧ್ಯಕ್ಷೆ ತಾರ ಅನುರಾಧ, ಕೃಷಿ ಸಚಿವ ಹಾಗೂ ನಿರ್ಮಾಪಕ ಬಿ.ಸಿ.ಪಾಟೀಲ್, ಬಿಜೆಪಿ ಸಂಸದ ಪಿ.ಸಿ.ಮೋಹನ್, ಫಿಲ್ಮ್ ಚೇಂಬರ್ ನಿರ್ಮಾಪಕ ವಲಯದ ಗೌರವ ಕಾರ್ಯದರ್ಶಿ ಎನ್.ಎಂ.ಸುರೇಶ್, ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷರುಗಳಾದ ಕೆ.ವಿ.ಚಂದುಶೇಖರ್, ಸಾ.ರಾ. ಗೋವಿಂದ್, ಹಿರಿಯ ನಿರ್ಮಾಪಕರಾದ ಕೆ.ಎನ್. ಚಂದ್ರಶೇಖರ್, ನಿರ್ಮಾಪಕರಾದ ರಮೇಶ್ ಯಾದವ್, ಎ. ಗಣೇಶ್ , ಉಮೇಶ್ ಬಣಕಾರ್, ಭಾ ಮಾ ಹರೀಶ್, ಭಾ.ಮಾ ಗಿರೀಶ್ ಸೇರಿದಂತೆ ನಿರ್ಮಾಪಕರು ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.