ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಜಾನಪದ ಕ್ರೀಡೆಯಾಗಿರುವ ಕಂಬಳ ಭಾರಿ ಪ್ರಸಿದ್ದಿ ಪಡೆದಿದೆ. ಕಂಬಳ ಕೋಣಗಳನ್ನು ಕಂಬಳ ಗದ್ದೆಯಲ್ಲಿ ಓಡಿಸುವ ಈ ಕ್ರೀಡೆಯನ್ನು ಕಣ್ತುಂಬಿಕೊಳ್ಳಲೆಂದು ದೇಶ ವಿದೇಶಗಳಿಂದ ಜನರು ಕರಾವಳಿಗೆ ಬರುತ್ತಾರೆ. ಈ ಸುಂದರ ಕ್ರೀಡೆಯನ್ನು ಸಿನಿಮಾ ಮೂಲಕ ತೋರಿಸುವ ಪ್ರಯತ್ನ ಆರಂಭಿಸಿದ್ದಾರೆ ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು. ಬಿರ್ದ್ದ ಕಂಬುಳ ಎಂಬ ಹೆಸರಿನಲ್ಲಿ ಇವರು ಸಿನಿಮಾ ನಿರ್ಮಾಣಕ್ಕಿಳಿದಿದ್ದು, ಈ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.
ರಾಜೇಂದ್ರ ಸಿಂಗ್ ಬಾಬು ಅವರು ಕಂಬಳ ಬಗ್ಗೆ ಸಿನಿಮಾ ಮಾಡುವುದನ್ನು ಕಳೆದ ವರ್ಷ ಮೂಡಬಿದಿರೆಯ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಘೋಷಿಸಿದ್ದರು. ಬಳಿಕ ಕಂಬಳ ಬಗ್ಗೆ ಸಿನಿಮಾ ಮಾಡಲೆಂದೇ ಕಂಬಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಅಧ್ಯಯನ ಮಾಡಿದ್ದರು.
ಕಂಬಳ ಬಗ್ಗೆ ಐದು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ ಸಿನಿಮಾ ಎ. ಆರ್ ಪ್ರೊಡಕ್ಷನ್ ಬ್ಯಾನರ್ನಡಿ ಅರುಣ್ ರೈ ತೋಡಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ತುಳುವಿನ ಖ್ಯಾತ ರಂಗ ಕಲಾವಿದ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾ ತುಳು ಭಾಷೆಯಲ್ಲಿ ನಿರ್ಮಾಣವಾಗಲಿದ್ದು, ಇದನ್ನು ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ಡಬ್ ಮಾಡಲು ತಯಾರಿಗಳು ನಡೆಯುತ್ತಿದೆ. ಸಾಧ್ಯವಾದರೆ ಇಂಗ್ಲಿಷ್ನಲ್ಲಿ ಡಬ್ ಮಾಡುವ ಯೋಜನೆಯಿದೆ.
ಬಿರ್ದ್ದ ಕಂಬುಳ ಸಿನಿಮಾ ಪೋಸ್ಟರ್ ಬಿಡುಗಡೆ ಕರಾವಳಿಯ ಕಂಬಳ ಕ್ರೀಡೆಯ ಬಗ್ಗೆ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಕಂಬಳದ ವಿಶೇಷತೆ ಬಗ್ಗೆ ಕಥೆಯ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಸಿನಿಮಾ ನಿರ್ಮಾಣ ಆರಂಭಿಸಲು ಉತ್ಸುಕವಾಗಿದೆ.
ಬಿರ್ದ್ದ ಕಂಬುಳ ಸಿನಿಮಾ ಪೋಸ್ಟರ್ ಬಿಡುಗಡೆ ಕಂಬಳ ನಡೆಯುವ ಅಕ್ಟೋಬರ್ ಬಳಿಕ ಸಿನಿಮಾ ಶೂಟಿಂಗ್ ನಡೆಸಿ ಡಿಸೆಂಬರ್ನಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರ ತಂಡ ಹಾಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ನಲ್ಲಿ ಕಂಬಳ ಸಿನಿಮಾ ಮನೋರಂಜನೆ ನೀಡಲಿದೆ.