ಚಿರಂಜೀವಿ ಸರ್ಜಾ ಅಭಿನಯದ 'ರಾಜಮಾರ್ತಾಂಡ' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಶುಕ್ರವಾರ ಬೆಳಗ್ಗೆಯೇ ಜ್ಯೂನಿಯರ್ ಚಿರಂಜೀವಿ ಸರ್ಜಾ ಈ ಟ್ರೇಲರ್ ಬಿಡುಗಡೆ ಮಾಡಿದ್ದಾನೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ 'ರಾಜಾಮಾರ್ತಾಂಡ' ಟ್ರೇಲರ್ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಪೊಗರು' ಪ್ರದರ್ಶನವಾಗುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಟ್ರೇಲರ್ ಪ್ರದರ್ಶನವಾಗುತ್ತಿದೆ.
ಇದು ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ಎಂಬುದು ಪ್ರಮುಖ ವಿಚಾರವಾದರೆ, ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ಧ್ರುವ ಧ್ವನಿ ನೀಡಿದ್ದಾರೆ ಎಂಬುದು ಮತ್ತೊಂದು ವಿಚಾರ. "ಎದುರಾಳಿ ದುಷ್ಟನೇ ಆಗಿರ್ಲಿ, ದ್ರೋಹಿನೇ ಆಗಿರ್ಲಿ, ಶತ್ರು ಸಂಹಾರ ಮಾಡೋಕಿಂತ ಮುಂಚೆ ಒಂದು ಸುವರ್ಣಾವಕಾಶ ಕೊಟ್ಟು ಕರುಣಿಸುವುದೇ ನಮ್ಮ ಹುಟ್ಟುಗುಣ " ಎಂದು ಧ್ರುವ ಸರ್ಜಾ ಡೈಲಾಗ್ ಹೊಡೆದಿದ್ದು, ಈ ಡೈಲಾಗ್‍ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ನಲ್ಲಿ ಚಿರಂಜೀವಿ ಅವರ ಡೈಲಾಗ್ ಕೂಡಾ ಇದೆ. ಚಿರಂಜೀವಿ ನಿಧನರಾಗುವುದಕ್ಕಿಂತ ಮುನ್ನವೇ ಸ್ವಲ್ಪ ಭಾಗ ಡಬ್ ಮಾಡಿದ್ದರಂತೆ. ಹಾಗೆ ಡಬ್ ಮಾಡಲಾದ ಭಾಗದಿಂದ, ಒಂದು ಸಂಭಾಷಣೆಯನ್ನು ಬಳಸಿಕೊಳ್ಳಲಾಗಿದೆ. "ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಕೊನೆಯವರೆಗೂ ಚಿರಋಣಿ ಆಗಿರ್ತೀನಿ" ಎಂದು ಚಿರು ಹೇಳಿರುವ ಸಂಭಾಷಣೆ ಚಿತ್ರದಲ್ಲಿದೆ.