ಚೆನ್ನೈ (ತಮಿಳುನಾಡು): ಕೌಟುಂಬಿಕ ಹಿಂಸೆ ಮತ್ತು ಕಿರುಕುಳದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಬಗ್ಗೆ ಮಕ್ಕಳ್ ನೀಧಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಅವರ ಟ್ವೀಟ್ ಅನ್ನು ಗಾಯಕಿ ಚಿನ್ಮಯಿ ಶ್ರೀಪಾದ ಟೀಕಿಸಿದ್ದಾರೆ.
ಫುಡ್ ಬ್ಯಾಂಕ್ ಇಂಡಿಯಾ ಎನ್ಜಿಓ ಇದರ ಸಂಸ್ಥಾಪಕಿ ಮತ್ತು ಮಾಧರ್ ಪಡೈ (ಎಂಎನ್‌ಎಂ ಮಹಿಳಾ ವಿಭಾಗ) ಸದಸ್ಯೆ ಸ್ನೇಹಾ ಮೋಹನ್ದಾಸ್ ಅವರು ಟ್ವೀಟ್ ಒಂದನ್ನು ಮಾಡಿ, ಅದರಲ್ಲಿ ತಾವು ತಮ್ಮ ಆತ್ಮರಕ್ಷಣೆಯನ್ನು ಹೇಗೆ ಮಾಡಿಕೊಳ್ಳುತ್ತಿರುವೆ ಎಂಬುದರ ಕುರಿತಾಗಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಕರಾಟೆಯ ಕೆಲ ಆತ್ಮರಕ್ಷಣಾ ವಿಧಾನಗಳನ್ನು ತಾವು ಕಲಿಯುತ್ತಿರುವ ಬಗೆಗಿನ ವಿಡಿಯೋ ಇದಾಗಿತ್ತು.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, "ಹಿಂಸೆಯು ಅಹಿಂಸೆಯನ್ನು ಎದುರಾದಾಗ ಅಲ್ಲಿ ಯಾವುದೇ ಸಂಘರ್ಷವಿರುವುದಿಲ್ಲ, ಅಪರಾಧಿಯು ಸಹಜವಾಗಿಯೇ ಬಹಿರಂಗವಾಗುತ್ತಾನೆ. ನಿಮ್ಮ ಆತ್ಮವಿಶ್ವಾಸವು ಪೆಪ್ಪರ್ ಸ್ಪ್ರೇ ಗಿಂತ ಹೆಚ್ಚು ಬಲವಾಗಿ ಕೆಲಸ ಮಾಡುತ್ತದೆ." ಎಂದು ಬರೆದಿದ್ದರು. ಅಂದರೆ ಮಹಿಳೆಯರು ಯಾವುದೇ ಆತ್ಮರಕ್ಷಣೆ ಕಲೆಯ ತರಬೇತಿ ಇಲ್ಲದೇ ಕೇವಲ ಆತ್ಮವಿಶ್ವಾಸದಿಂದಲೇ ತಮ್ಮ ಮೇಲೆ ನಡೆಯಬಹುದಾದ ದೌರ್ಜನ್ಯವನ್ನು ತಡೆಯಬಹುದು ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ಅರ್ಥೈಸಲಾಗಿತ್ತು.
ಈ ಟ್ವೀಟ್ ಸರಣಿಗೆ ಪ್ರತಿಕ್ರಿಯಿಸಿದ ಗಾಯಕಿ ಚಿನ್ಮಯಿ ಶ್ರೀಪಾದ, ಆತ್ಮರಕ್ಷಣೆಯ ಕಲೆಗಳನ್ನು ಮಹಿಳೆಯರು ಕಲಿಯುವುದನ್ನು ಕೀಳಾಗಿ ಪರಿಗಣಿಸಿರುವ ಕಮಲ ಹಾಸನ್, ಕೇವಲ ಆತ್ಮವಿಶ್ವಾಸದಿಂದ ದೌರ್ಜನ್ಯಗಳನ್ನು ಎದುರಿಸಬಹುದು ಎಂದು ಅವರು ತಿಳಿದಿದ್ದಾರೆ ಎಂದು ಹೇಳಿದ್ದಾರೆ.