ಕರ್ನಾಟಕ

karnataka

ಚಿಕ್ಕಣ್ಣ @ 35: ಬಜ್ಜಿ, ಬೋಂಡಾ ಮಾರುತ್ತಿದ್ದ ಚಿಕ್ಕಣ್ಣ ಸಿನಿ ಜರ್ನಿಯ ಇಂಟರೆಸ್ಟಿಂಗ್​ ಕಹಾನಿ

By

Published : Jun 22, 2021, 11:54 AM IST

Updated : Jun 22, 2021, 12:14 PM IST

ನಾಟಕದ ವ್ಯಾಮೋಹದಿಂದ, ಚಿಕ್ಕಣ್ಣನಿಗೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಹಠಕ್ಕೆ ಬಿದ್ದು ಬೆಂಗಳೂರಿಗೆ ಬರ್ತಾರೆ. ಯಾರ ಪರಿಚಯವೇ ಇಲ್ಲದ ಈ ದೊಡ್ಡ ನಗರದಲ್ಲಿ ಪಬ್ಲಿಕ್ ಟಾಯ್ಲೆಟ್​ನಲ್ಲಿ ಸ್ನಾನ ಮಾಡಿಕೊಂಡು ರಾತ್ರಿಯೆಲ್ಲಾ ಮೆಜೆಸ್ಟಿಕ್ ಸುತ್ತಮುತ್ತ ಓಡಾಡಿಕೊಂಡಿದ್ದ ಚಿಕ್ಕಣ್ಣನಿಗೆ ಅದೃಷ್ಟ ಒಲಿದು ಬರುತ್ತೆ. ಸ್ಯಾಂಡಲ್​ವುಡ್​ನಲ್ಲಿ ಹಾಸ್ಯದ ಹೊನಲು ಹರಿಸುತ್ತಿರುವ ಈ ಚಿಕ್ಕಣ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

Chikkanna
ಚಿಕ್ಕಣ್ಣ

ಕಲಾ ಸರಸ್ವತಿ ಒಲಿದು, ಒಂಚೂರು ಅದೃಷ್ಟ ಇದ್ದರೆ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಅನ್ನೋದಕ್ಕೆ ಸಿನಿಮಾ ರಂಗದಲ್ಲಿ ಸಾಕಷ್ಟು ತಾರೆಯರು ಸ್ಟಾರ್​ಗಳು ಮಿಂಚುತ್ತಿರೋದು ಸಾಕ್ಷಿ. ಇಂತಹ ಸಾಧಕರ ಸಾಲಿನಲ್ಲಿ ನಿಲ್ತಾರೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಹಾಸ್ಯ ನಟನಾಗಿರೋ ಚಿಕ್ಕಣ್ಣ.

ಹಾಸ್ಯ ನಟ ಚಿಕ್ಕಣ್ಣ

ಸ್ಯಾಂಡಲ್​ವುಡ್​ನಲ್ಲಿ ಕಾಮಿಡಿ ಕಿಂಗ್ ಅಂತ ಕರೆಯಿಸಿಕೊಂಡಿರುವ ಚಿಕ್ಕಣ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಈ ಹಳ್ಳಿ ಹೈದ, ಚಿತ್ರರಂಗದಲ್ಲಿ ಸಿನಿಮಾ ನಟನಾದ ರೋಚಕ ಕಥೆ ಬಗ್ಗೆ ಇಲ್ಲಿದೆ ರೋಚಕ ಕಹಾನಿ.

ನಟ ಯಶ್​ ಜೊತೆಗೆ ಚಿಕ್ಕಣ್ಣ

ಚಿಕ್ಕಣ್ಣ 1986, ಜೂನ್ 22 ರಂದು ಮೈಸೂರು ಜಿಲ್ಲೆಯ ಬಲ್ಲಹಳ್ಳಿಯಲ್ಲಿ ಭೈರೇಗೌಡ-ನಿಂಗವ್ವ ದಂಪತಿಗೆ ಜನಿಸಿದ ಆರು ಮಕ್ಕಳಲ್ಲಿ ಚಿಕ್ಕಣ್ಣ ಐದನೇಯವರು. ಬಡಕುಟುಂಬದಲ್ಲಿ ಹುಟ್ಟಿದ ಚಿಕ್ಕಣ್ಣ ಬಾಲ್ಯದ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟವರು. ಎಷ್ಟೋ ಬಾರಿ ಚಿಕ್ಕಣ್ಣ ಬರೀ ಮಂಡಕ್ಕಿ, ಬನ್ ತಿಂದುಕೊಂಡು ದಿನಗಳನ್ನು ಕಳೆದಿದ್ದಾರೆ. ಅಷ್ಟೇ ಅಲ್ಲ, ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ, ತಾವು ಇದ್ದ ಹಳ್ಳಿಯಲ್ಲಿ ಗಾರೆ ಕೆಲಸ ಹಾಗು ಬಜ್ಜಿ, ಬೋಂಡಾ ಮಾರಿ ಜೀವನ ಸಾಗಿಸಿದವರು. ಹೀಗೆ ಗಾರೆ ಕೆಲಸ ಹಾಗು ದಿನಗೂಲಿ ಕೆಲಸಗಳನ್ನ ಮಾಡ್ತಾ ಚಿಕ್ಕಣ್ಣ ಶಿಕ್ಷಣ ಪಡೆಯುತ್ತಿದ್ದರು.

ಹಾಸ್ಯ ನಟ ಚಿಕ್ಕಣ್ಣ

ಈ ಸಮಯದಲ್ಲಿ ಚಿಕ್ಕಣ್ಣನಿಗೆ ನಾಟಕದ ಮೇಲೆ ಆಸಕ್ತಿ ಬೆಳೆದು, ಸ್ನೇಹಿತರ ಜೊತೆಗೂಡಿ ನಾಟಕಗಳನ್ನ ಆಡಲು ಶುರು ಮಾಡಿದ್ರಂತೆ. ಈ ನಾಟಕದಿಂದ ಚಿಕ್ಕಣ್ಣ ಸಿನಿಮಾ ನಟ‌ನಾಗುತ್ತಾನೆ ಅಂತ ಸ್ವತಃ ಚಿಕ್ಕಣ್ಣನೇ ಅಂದುಕೊಂಡಿರಲಿಲ್ಲ. ಮೈಸೂರಿನ ದೃಶ್ಯ ಕಲಾವಿದ ತಂಡದಲ್ಲಿ ಚಿಕ್ಕಣ್ಣ ಕಾಮಿಡಿ ಶೋಗಳನ್ನು ಮಾಡುತ್ತಾ ತಮ್ಮ ಕಲಾಜೀವನ ಆರಂಭಿಸುತ್ತಾರೆ. ಈ ತಂಡದ ಮೂಲಕ ಹಬ್ಬ ಮತ್ತು ರಾಜ್ಯೋತ್ಸವದ ದಿನಗಳ ಚಿಕ್ಕಣ್ಣ ನಾಟಕಗಳನ್ನ ಮಾಡ್ತಾ ಇರ್ತಾರೆ‌. ಆದರೆ ಚಿಕ್ಕಣ್ಣನ ತಂದೆಗೆ, ತಮ್ಮ ಮಗ ನಾಟಕಗಳಲ್ಲಿ ಅಭಿನಯಿಸುವುದು ಸ್ವಲ್ಪವೂ ಇಷ್ಟ ಇರಲಿಲ್ಲ. ಆದರೂ ಚಿಕ್ಕಣ್ಣ ತಂದೆಗೆ ಸುಳ್ಳು ಹೇಳಿ ನಾಟಕಗಲ್ಲಿ ಅಭಿನಯಿಸುತ್ತಿದ್ದರು.

ನಟ ದರ್ಶನ್​ ಜೊತೆ ಚಿಕ್ಕಣ್ಣ

ಈ ನಾಟಕದ ವ್ಯಾಮೋಹದಿಂದ, ಚಿಕ್ಕಣ್ಣನಿಗೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಹಠಕ್ಕೆ ಬಿದ್ದು ಬೆಂಗಳೂರಿಗೆ ಬರ್ತಾರೆ. ಯಾರ ಪರಿಚಯವೇ ಇಲ್ಲದ ಈ ದೊಡ್ಡ ನಗರದಲ್ಲಿ ಪಬ್ಲಿಕ್ ಟಾಯ್ಲೆಟ್​ನಲ್ಲಿ ಸ್ನಾನ ಮಾಡಿಕೊಂಡು ರಾತ್ರಿಯೆಲ್ಲಾ ಮೆಜೆಸ್ಟಿಕ್ ಸುತ್ತಮುತ್ತ ಓಡಾಡಿಕೊಂಡು ಕುಳಿತಲ್ಲೇ ನಿದ್ರೆ ಮಾಡುತ್ತಿದ್ದ ಚಿಕ್ಕಣ್ಣನಿಗೆ ಅದೃಷ್ಟ ಒಲಿದು ಬರುತ್ತೆ. ಖಾಸಗಿ ಚಾನಲ್​ನಲ್ಲಿ, ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ, ಚಿಕ್ಕಣ್ಣನಿಗೆ ಅಭಿನಯಿಸುವ ಅವಕಾಶ ಸಿಗುತ್ತೆ. ಇದುವೇ ಚಿಕ್ಕಣ್ಣನಿಗೆ ಸಿನಿಮಾ ಬದುಕಿಗೆ ದೊಡ್ಡ ತಿರುವು ನೀಡುತ್ತೆ.

ಶಿವಣ್ಣನ ಜೊತೆ ಸೆಲ್ಫಿ

ಹೀಗೆ ಕಾಮಿಡಿ ಶೋನಲ್ಲಿ ವಿಭಿನ್ನ ಮ್ಯಾನರಿಸಂನಿಂದ ಪ್ರೇಕ್ಷಕರನ್ನ ನಕ್ಕು ನಲಿಸುತ್ತಿದ್ದ ಚಿಕ್ಕಣ್ಣನಿಗೆ ಮತ್ತೊಂದು ಬಂಪರ್ ಲಾಟರಿ ಹೊಡೆಯುತ್ತೆ‌. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ, ಚಿಕ್ಕಣ್ಣ ಕಾಮಿಡಿ ನಿರೂಪಣೆ ಶೈಲಿ ನೋಡಿ ಖುಷಿಪಟ್ಟ ಯಶ್ ತಮ್ಮ ಕಿರಾತಕ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಅವಕಾಶ ನೀಡುತ್ತಾರೆ. ಚೊಚ್ಚಲ ಚಿತ್ರದಲ್ಲಿ ಚಿಕ್ಕಣ್ಣ ಸೆಂಚುರಿ ಬಾರಿಸ್ತಾ ರಾತ್ರೋರಾತ್ರಿ ಸ್ಯಾಂಡಲ್​ವುಡ್​ನಲ್ಲಿ ಚಿಕ್ಕಣ್ಣ ಬಹು ಬೇಡಿಕೆಯ ಹಾಸ್ಯ ನಟನಾಗುತ್ತಾರೆ‌.

ಹುಲಿ ಜೊತೆ ರಾಜಾಹುಲಿ ದೋಸ್ತ್​

ಕಿರಾತಕ ಚಿತ್ರದ ಬಳಿಕ, ಯಶ್ ಜೊತೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಾರೆ, ಅದುವೇ ರಾಜಾಹುಲಿ. ಈ ಚಿತ್ರದಲ್ಲಿ ಯಶ್ ಮತ್ತು ಚಿಕ್ಕಣ್ಣ ಕಾಂಬಿನೇಶನ್, ವರ್ಕ್​ಔಟ್‌ ಆಗುತ್ತೆ. ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತೆ. ಈ ಸಕ್ಸಸ್ ಚಿಕ್ಕಣ್ಣನಿಗೆ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತಂದು ಕೊಡುತ್ತೆ. ಈ ಎರಡು ಸಿನಿಮಾಗಳ ಯಶಸ್ಸಿನ ನಂತರ ಲಕ್ಕಿ, ಬುಲ್ ಬುಲ್, ರನ್ನ, ಅಧ್ಯಕ್ಷ, ಮಾಸ್ಟರ್ ಪೀಸ್, ವಿಕ್ಟರಿ, ರಥಾವರ, ವಜ್ರಕಾಯ, ದೊಡ್ಮನೆ ಹುಡ್ಗ, ರಾಜಕುಮಾರ, ಮಫ್ತಿ, ರಾಬರ್ಟ್, ರ್ಯಾಂಬೋ 2, ಕೃಷ್ಣ ಟಾಕೀಸ್, ಫ್ರೆಂಚ್ ಬಿರಿಯಾನಿ ಸೇರಿದಂತೆ ಬರೋಬ್ಬರಿ 85ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಚಿಕ್ಕಣ್ಣ ತಮ್ಮ ಕಾಮಿಡಿಯಿಂದ ಪ್ರೇಕ್ಷಕರನ್ನ ರಂಜಿಸಿದ್ದಾರೆ.

ಸಿನಿಮಾ ಸೆಟ್​ನಲ್ಲಿ ಚಿಕ್ಕಣ್ಣ

ಒಂದು ಅಚ್ಚರಿ ಸಂಗತಿ ಅಂದರೆ ಯಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ದರ್ಶನ್, ಸುದೀಪ್, ಧ್ರುವ ಸರ್ಜಾ, ಶ್ರೀಮುರಳಿ, ಶರಣ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ‌. ಹಾಸ್ಯ ನಟನಾಗಿ, ಕನ್ನಡ ಚಿತ್ರರಂಗದಲ್ಲಿ, ತನ್ನದೇ ಛಾಪು ಮೂಡಿಸಿರುವ ಚಿಕ್ಕಣ್ಣ ಹೀರೋ ಆಗೋದಕ್ಕೆ ಸಜ್ಜಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಚಿಕ್ಕಣ್ಣ ಹೀರೋ ಆಗಿ ನಟಿಸುವ ಚಿತ್ರ ಸೆಟ್ಟೇರಬೇಕಿತ್ತು. ಆದರೆ ಕೊರೊನಾದಿಂದಾಗಿ ಎಲ್ಲಾ ನಿಂತಿದ್ದು, ತಮ್ಮ ಹುಟ್ಟೂರಿನಲ್ಲಿ ಮನೆಯ ಕೆಲಸಗಳನ್ನ ಮಾಡ್ತಾ ಚಿಕ್ಕಣ್ಣ ಕಾಲ ಕಳೆಯುತ್ತಿದ್ದಾರೆ‌. ಬಜ್ಜಿ ಬೊಂಡ ಮಾಡುತ್ತಾ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ, ಇಂದು ಹೀರೋ ಆಗೋ ಮಟ್ಟಿಗೆ ಬೆಳೆದು ಬೇರೆಯವರಿಗೆ ಮಾದರಿ ಆಗಿದ್ದಾರೆ.

ಅವರಿಗೆ 'ಈಟಿವಿ ಭಾರತ' ಕಡೆಯಿಂದ ಹುಟ್ಟುಹಬ್ಬದ ಶುಭಾಶಗಳನ್ನು ಕೋರುತ್ತೇವೆ..

ನಟ ಚಿಕ್ಕಣ್ಣ
Last Updated : Jun 22, 2021, 12:14 PM IST

ABOUT THE AUTHOR

...view details