'ಚಾರ್ಲಿ 777' ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರೋ ಬಹು ನಿರೀಕ್ಷೆಯ ಸಿನಿಮಾ. ಸದ್ಯ ಪೋಸ್ಟರ್ ಹಾಗೂ ಮೇಕಿಂಗ್ನಿಂದ ಗಮನ ಸೆಳೆಯುತ್ತಿರೋ ಚಾರ್ಲಿ 777 ಸಿನಿಮಾದ ಕ್ಲೈಮಾಕ್ಸ್ ಶೂಟಿಂಗ್ ಅನ್ನು ಕಾಶ್ಮೀರದ ಹಿಮಪಾತದಲ್ಲಿ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಚಿತ್ರಕ್ಕೆ ಕಿರಣ್ ರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆಯಂತೆ.
ಭಾರಿ ಹಿಮದ ನಡುವೆ ನಡೆಯಲಿದೆ ಚಾರ್ಲಿ 777 ಕ್ಲೈಮ್ಯಾಕ್ಸ್ ಈ ಚಿತ್ರದಲ್ಲಿ ದೊಡ್ಡ ಪ್ರಮಾಣದ ಹಿಮಪಾತದ ಸನ್ನಿವೇಶ ಬರುತ್ತಂತೆ. ಈ ಕಾರಣಕ್ಕೆ ಕಾಶ್ಮೀರದ ಹಿಮಪಾತದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಹೀಗಾಗಿ ಮುಂದಿನ ವರ್ಷ ಜನವರಿ ಮೊದಲ ವಾರದಲ್ಲಿ ಚಾರ್ಲಿ ಸಿನಿಮಾ ಶೂಟಿಂಗ್ಗಾಗಿ ಕಾಶ್ಮೀರಕ್ಕೆ ತೆರಳಲು ನಿರ್ಧರಿಸಿದ್ದೇವೆ ಅಂತಾ ಸಿಂಪಲ್ ಸ್ಟಾರ್ ತಿಳಿಸಿದ್ದಾರೆ.
ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಸಿನಿಮಾ ಸ್ಟೋರಿ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೆಟ್ಟಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಶಾರ್ವರಿ ಮತ್ತು ಪ್ರಾಣ್ಯ ಎಂಬ ಪುಟಾಣಿ ಮಕ್ಕಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಾಬಿ ಸಿಂಹ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಪರಮ್ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲ್ಮ್ ಬ್ಯಾನರ್ನಲ್ಲಿ ನಿರ್ಮಾಣ ಆಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ರಾಜ್ ಆ್ಯಕ್ಷನ್ ಹೇಳುತ್ತಿದ್ದಾರೆ. ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದ್ದು, ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತವಿದೆ. ಸದ್ಯ ಚಿತ್ರ ತಂಡ 14 ದಿನಗಳ ಕಾಲ ಕಾಶ್ಮೀರ, ಚಂಡಿಗಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಲಿದೆಯಂತೆ.