ಕನ್ನಡ ಚಿತ್ರರಂಗದಲ್ಲಿ ಪ್ರೀಮಿಯರ್ ಶೋ ಎಂಬ ಪದವನ್ನು ಕೇಳಿ ಬಹಳ ದಿನಗಳೇ ಆಗಿದ್ದವು. ಬಹುಶಃ ಕಳೆದ ವರ್ಷದ ಕೊನೆಯಲ್ಲಿ ಊರ್ವಶಿ ಚಿತ್ರಮಂದಿರದಲ್ಲಿ ನಡೆದ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪ್ರೀಮಿಯರ್ ಶೋಗೆ ದೊಡ್ಡ ಸಂಖ್ಯೆಯ ಸೆಲಬ್ರಿಟಿಗಳು ಬಂದಿದ್ದು ಬಿಟ್ಟರೆ ನಂತರ ಯಾವೊಂದು ಚಿತ್ರಕ್ಕೂ ಅಷ್ಟು ಸೆಲಬ್ರಿಟಿಗಳು ಬಂದಿರಲಿಲ್ಲ. ಈಗ 'ಆಕ್ಟ್ 1978' ಸಿನಿಮಾ ಮೂಲಕ ಮತ್ತೆ ಈ ಸಂಭ್ರಮ ಆರಂಭವಾಗಿದೆ.
ಎಂಟು ತಿಂಗಳ ನಂತರ ಮತ್ತೆ ಪ್ರೀಮಿಯರ್ ಶೋಗೆ ಬಂದ ಸೆಲಬ್ರಿಟಿಗಳು
ನವೆಂಬರ್ 20 ರಂದು ಮಂಸೋರೆ ನಿರ್ದೇಶನದ 'ಆಕ್ಟ್ 1978' ಸಿನಿಮಾ ಬಿಡುಗಡೆಯಾಗಿದೆ. ಹಿಂದಿನ ದಿನ, ಅಂದರೆ ನವೆಂಬರ್ 19 ರಂದು ರಾತ್ರಿ ವೀರೇಶ್ ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಬಹಳ ಸೆಲಬ್ರಿಟಿಗಳು ಈ ಪ್ರೀಮಿಯರ್ ಶೋಗೆ ಬಂದು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಆಕ್ಟ್ 1978' ಸಿನಿಮಾ ನವೆಂಬರ್ 20 ಶುಕ್ರವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಗುರುವಾರ ರಾತ್ರಿ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ವಿಶೇಷ ಪ್ರದರ್ಶನವೊಂದನ್ನು ಚಿತ್ರತಂಡದವರು ಆಯೋಜಿಸಿದ್ದರು. ಈ ಪ್ರದರ್ಶನಕ್ಕೆ ಕನ್ನಡ ಚಿತ್ರರಂಗದ ಸಾಕಷ್ಟು ಸೆಲಬ್ರಿಟಿಗಳು ಬಂದು ಸಿನಿಮಾ ನೋಡಿದ್ದಾರೆ. ರಂಗಾಯಣ ರಘು, ನೀತು, ಶ್ರುತಿ, ತಾರಾ, ಸುಧಾರಾಣಿ, ಮಾಳವಿಕಾ ಅವಿನಾಶ್, ವಸಿಷ್ಠ ಸಿಂಹ, ಜಯತೀರ್ಥ, ಎಂ.ಜಿ. ಶ್ರೀನಿವಾಸ್, ಬಿ.ಎಸ್. ಲಿಂಗದೇವರು, ಜಿ.ಎಸ್. ಬಸವರಾಜ್, ಪಿ. ಶೇಷಾದ್ರಿ, ಕಾರುಣ್ಯ ರಾಮ್, ಸೀತಾ ಕೋಟೆ, ನಾಗಶೇಖರ್, ಪಾವನಾ ಗೌಡ, ಯಶ್ ಶೆಟ್ಟಿ, ಅನಿತಾ ಭಟ್ ಸೇರಿದಂತೆ ಹಲವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ.
ಅದಕ್ಕೂ ಮುನ್ನವೇ ಕಿಚ್ಚ ಸುದೀಪ್ ಈ ಚಿತ್ರವನ್ನು ನೋಡಿ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶುಕ್ರವಾರ ಸಂಜೆ ಉತ್ತರಹಳ್ಳಿಯ ಬಾಲಾಜಿ ಚಿತ್ರಮಂದಿರದಲ್ಲಿ ' ಆ್ಯಕ್ಟ್ 1978' ಸಿನಿಮಾ ವೀಕ್ಷಿಸಿದ ದುನಿಯಾ ವಿಜಯ್, ನಿರ್ದೇಶಕ ಮಂಸೋರೆ ಅವರನ್ನು ಸನ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೆಲಬ್ರಿಟಿಗಳು ಚಿತ್ರವನ್ನು ನೋಡಲಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ಭಯ ಬಿಟ್ಟು ಚಿತ್ರ ನೋಡಿ ಎಂದು ಪ್ರೇಕ್ಷಕರಿಗೂ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.