ಬೆಂಗಳೂರು: ನಟಿ ಶ್ರುತಿ ಹರಿಹರನ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಪಡಿಸಲು ಸಿಟಿ ಸಿವಿಲ್ ನ್ಯಾಯಾಲಯ ನಿರಾಕರಿಸಿದೆ.
ಮಿ ಟೂ ಪ್ರಕರಣ: ನ್ಯಾಯಾಲಯದಲ್ಲಿ ಶ್ರುತಿ ಹರಿಹರನ್ಗೆ ಹಿನ್ನಡೆ - ಸಿಟಿ ಸಿವಿಲ್ ನ್ಯಾಯಾಲಯ
ಕಳೆದ ವರ್ಷ ವಿಸ್ಮಯ ಸಿನಿಮಾ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆ ಚಿತ್ರದ ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದನ್ನು ರದ್ದು ಪಡಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ಶ್ರುತಿಗೆ ಹಿನ್ನಡೆಯಾಗಿದೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಿ ಟೂ ಆರೋಪದ ಪ್ರಕರಣದ ವೇಳೆ ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಪಡಿಸುವಂತೆ ಶ್ರುತಿ ಕೋರ್ಟ್ ಮೊರೆ ಹೋಗಿದ್ದರು. ಇಂದು ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬಂತು. ಈ ವೇಳೆ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್ ವಾದ ಮಾಡಿ, ಶ್ರುತಿ ವಿನಾಕಾರಣ ಆರೋಪ ಮಾಡಿ ನಟ ಅರ್ಜುನ್ ಸರ್ಜಾ ಘನತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಈ ಅರ್ಜಿ ವಜಾ ಮಾಡಿತು. ಇದರಿಂದ ಸದ್ಯಕ್ಕೆ ಮಾನನಷ್ಟ ಪ್ರಕರಣದಲ್ಲಿ ನಟಿ ಶ್ರುತಿ ಹರಿಹರನ್ಗೆ ಹಿನ್ನಡೆಯಾದಂತಾಗಿದೆ.