ಬೆಂಗಳೂರು: ಈ ಸಾಲಿನ 'ಪದ್ಮ ಪ್ರಶಸ್ತಿ'ಗಾಗಿ ಕರ್ನಾಟಕದಿಂದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ. ನಿರ್ದೇಶಕ ಹಾಗು ನಟ ರಿಷಬ್ ಶೆಟ್ಟಿ, ಇಡೀ ಭಾರತೀಯ ಚಿತ್ರರಂಗ ಕಂಡ ಮಹಾನ್ ನಟ ಅನಂತ್ ನಾಗ್ ಕುರಿತಾಗಿ ಟ್ವಿಟರ್ನಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣ. ಹೀಗಾಗಿ #AnanthnagforPadma #PeoplesPadma ಎಂಬ ಹ್ಯಾಷ್ ಟ್ಯಾಗ್ ಬಳಸುವ ಮೂಲಕ ಬೆಂಬಲ ಸೂಚಿಸೋಣ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಪ್ರಶಸ್ತಿ'ಗೆ ಸೆ. 15ರೊಳಗೆ ಸೂಕ್ತ ವ್ಯಕ್ತಿಗಳ ಹೆಸರು ನಾಮ ನಿರ್ದೇಶನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ತಮ್ಮ ವಿಶಿಷ್ಟ ಅಭಿನಯ ಹಾಗೂ ವ್ಯಕ್ತಿತ್ವದ ಮೂಲಕ ಆಲ್ ಟೈಮ್ ಎವರ್ ಗ್ರೀನ್ ಹೀರೋ ಅಂತಾ ಕರೆಸಿಕೊಂಡಿರುವ ನಟ ಅನಂತ್ ನಾಗ್. ಸುಮಾರು ನಾಲ್ಕು ದಶಕದಿಂದ ಭಾರತೀಯ ಸಿನಿಮಾ ಲೋಕದಲ್ಲಿ ಮಿಂಚಿರುವ ಅನಂತ್ ನಾಗ್ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ಅನಂತ್ ನಾಗ್ ಅಭಿನಯಿಸಿರೋದು ವಿಶೇಷ. ಈ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಕೂಡ ಈ ನಾಡು ಕಂಡ ಶ್ರೇಷ್ಠ ನಟನಾಗಿರೋ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.