ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಪ್ರಕಾಶ್ ಅವರಿಗೆ ಅವರಿಗೆ 44 ವರ್ಷ ವಯಸ್ಸಾಗಿತ್ತು.
ಬುಲೆಟ್ ಪ್ರಕಾಶ್ ಜನಿಸಿದ್ದು ಬೆಂಗಳೂರಿನಲ್ಲಿ. ಪ್ರಕಾಶ್ಗೆ ಬಾಲ್ಯದಿಂದಲೇ ಸಿನಿಮಾ ಮೇಲೆ ಒಲವು. ಬಡ ಕುಟುಂಬದಲ್ಲಿ ಜನಿಸಿದ ಅವರು ಸಿನಿಮಾ ಮೇಲಿನ ಪ್ರೀತಿಯಿಂದ ಹಾಗೂ ಜೀವನ ನಡೆಸಲು ರಂಗಭೂಮಿ ಸೇರಿದರು. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಕೊನೆಗೂ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಎಕೆ 47' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ತಮ್ಮದೇ ಆದ ಮ್ಯಾನರಿಸಂನಿಂದ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು ಪ್ರಕಾಶ್. ಪ್ರಕಾಶ್ ಬುಲೆಟ್ ಬೈಕನ್ನು ಬಳಸುತ್ತಿದ್ದರಿಂದ ಅವರ ಹೆಸರಿನ ಹಿಂದೆ ಸ್ನೇಹಿತರು ಬುಲೆಟ್ ಸೇರಿಸಿದರು. ಅಂದಿನಿಂದ ಅವರು ಬುಲೆಟ್ ಪ್ರಕಾಶ್ ಎಂದೇ ಹೆಸರಾದರು.
ಶಿವರಾಜ್ ಕುಮಾರ್ ಜೊತೆ ಬುಲೆಟ್ ಪ್ರಕಾಶ್ ಧ್ರುವ, ಜಾಕಿ, ಜಟಾಯು, ನಿಂಬೆಹುಳಿ, ಮಿ. ಐರಾವತ, ಮದುವೆ ಮಮತೆ ಕರೆಯೋಲೆ, ಅಕಿರ, ಜಗ್ಗುದಾದ, ಸಾಹೇಬ, ರಾಜಸಿಂಹ ಸೇರಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಕಾಶ್ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್, ಸಾಧು ಕೋಕಿಲ, ಸುದೀಪ್, ದರ್ಶನ್, ದುನಿಯಾ ವಿಜಯ್ ಸೇರಿ ಬಹುತೇಕ ಎಲ್ಲಾ ನಟರೊಂದಿಗೆ ಬುಲೆಟ್ ನಟಿಸಿದ್ದರು. ಬಿಗ್ ಬಾಸ್ ಸೀಸನ್ 2 ರಲ್ಲೂ ಪ್ರಕಾಶ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸ್ಪರ್ಧಿಸಿದ್ದರು. ಮಂಜುಳಾ ಎಂಬುವವರನ್ನು ಕೈ ಹಿಡಿದ ಪ್ರಕಾಶ್ಗೆ ಒಬ್ಬ ಪುತ್ರಿ, ಪುತ್ರ ಇದ್ದಾರೆ. ಸಿನಿಮಾ ಮಾತ್ರವಲ್ಲ, ಬುಲೆಟ್ ಪ್ರಕಾಶ್ ರಾಜಕೀಯದಲ್ಲೂ ಸಕ್ರಿಯರಾಗಿದ್ದು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು.
ದೇಹದ ತೂಕ ಹೆಚ್ಚಾಗಿದ್ದ ಕಾರಣ ಕೆಲವು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಪ್ರಕಾಶ್. ಆದರೆ ನಂತರ ಅವರ ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಸಿನಿಮಾಗಳಿಂದ ದೂರವಿದ್ದ ಅವರು 'ನನ್ನ ಕೊನೆಯುಸಿರು ಇರುವವರೆಗೂ ನಾನು ಕಲಾಸೇವೆ ಮಾಡುತ್ತಲೇ ಇರುತ್ತೇನೆ' ಎಂದು ಕಾರ್ಯಕ್ರವೊಂದರ ವೇದಿಕೆ ಮೇಲೆ ಕಣ್ಣೀರಿಡುತ್ತಾ ಹೇಳಿಕೊಂಡಿದ್ದರು. ಇತ್ತೀಚೆಗೆ ಮತ್ತೆ ಅನಾರೋಗ್ಯಪೀಡಿತರಾದ ಬುಲೆಟ್ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಬೇಕು ಎಂಬುದು ಬುಲೆಟ್ ಪ್ರಕಾಶ್ ಅವರ ಆಸೆಯಾಗಿತ್ತು. ಆದರೆ ಆ ಆಸೆ ನೆರವೇರುವ ಮುನ್ನವೇ ಇಹಲೋಹ ತ್ಯಜಿಸಿದ್ದಾರೆ ಪ್ರಕಾಶ್. ಬುಲೆಟ್ ಪ್ರಕಾಶ್ ನಿಧನಕ್ಕೆ ಸ್ಯಾಂಡಲ್ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.