ಕನ್ನಡ ಚಿತ್ರರಂಗದಲ್ಲಿ ಖಳನಟರು ಎಂದರೆ ನೆನಪಿಗೆ ಬರುವುದು ನಟ ಭಯಂಕರ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಸುಧೀರ್, ಸುಂದರಕೃಷ್ಣ ಅರಸ್, ಹೀಗೆ ಹಲವಾರು ಖ್ಯಾತನಾಮರು ಬೆಳ್ಳಿತೆರೆ ಮೇಲೆ ಖಳನಟರಾಗಿ ರಾರಾಜಿಸಿದ್ದಾರೆ.
ಆದರೆ ಈಗ ಕನ್ನಡ ಚಿತ್ರರಂಗದಲ್ಲಿ ಬಹುತೇಕ ತಮ್ಮ ಭಾಷೆಯ ನಟರಿಗಿಂತ ಪರಭಾಷೆ ನಟರೇ ವಿಲನ್ಗಳಾಗಿ ಮಿಂಚುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್ ಖಳನಟರೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಖಳನಟರ ಬಗ್ಗೆ ಇಲ್ಲಿದೆ ಮಾಹಿತಿ.
ಡಾ. ವಿಷ್ಣುವರ್ಧನ್ ಜೊತೆ ಅಕ್ಷಯ್ ಕುಮಾರ್ 1993ರಲ್ಲಿ ತೆರೆಕಂಡ ಡಾ. ವಿಷ್ಣುವರ್ಧನ್ ಅಭಿನಯದ 'ವಿಷ್ಣುವಿಜಯ' ಸಿನಿಮಾದಲ್ಲಿ ಸಾಹಸಸಿಂಹ ಒಬ್ಬರನ್ನು ಬಿಟ್ಟರೆ ಸಿನಿಮಾ ಪೂರ್ತಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪಂಕಜ್ ಧೀರ್, ಪುನೀತ್ ಇಸ್ರಾ ಹೀಗೆ ಬಾಲಿವುಡ್ ನಟ ಹಾಗೂ ಖಳನಟರೇ ತುಂಬಿದ್ದರು.
ಇದಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಫುಲ್ಟೈಮ್ ಖಳನಟನಾಗಿ ಅಬ್ಬರಿಸಿದ ಖಳನಟ ಬಾಲಿವುಡ್ನ ಆಶೀಶ್ ವಿದ್ಯಾರ್ಥಿ. 1999ರಂದು ಬಿಡುಗಡೆಯಾದ ಶಿವರಾಜ್ ಕುಮಾರ್ ಅಭಿನಯದ 'ಎಕೆ 47' ಚಿತ್ರದಲ್ಲಿ ಅಂಡರ್ವರ್ಲ್ಡ್ ಡಾನ್ ಆಗಿ ಅಬ್ಬರಿಸಿದ ಆಶೀಶ್ ವಿದ್ಯಾರ್ಥಿ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಅಬ್ಬರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಮತ್ತೊಬ್ಬ ಬಾಲಿವುಡ್ ಖಳನಟ ಪ್ರದೀಪ್ ಸಿಂಗ್ ರಾವತ್. ಉಪೇಂದ್ರ ನಟನೆಯ 'ಪರೋಡಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಪ್ರದೀಪ್ ಸಿಂಗ್ ರಾವತ್ ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ಆರ್ಭಟಿಸಿದ್ದಾರೆ.
ಸೂರಿ ನಿರ್ದೇಶನದ 'ಅಣ್ಣಾಬಾಂಡ್' ಸಿನಿಮಾದಲ್ಲಿ, ಪುನೀತ್ ರಾಜ್ಕುಮಾರ್ ಎದುರು ಅಬ್ಬರಿಸದ ವಿಲನ್ ಜಾಕಿಶ್ರಾಫ್. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಜಾಕಿಶ್ರಾಫ್ ಡ್ರಗ್ ಮಾಫಿಯಾ ಡಾನ್ ಆಗಿ ಮಿಂಚಿದ್ದರು. ನಂತರ ಪುನೀತ್ ರಾಜ್ಕುಮಾರ್ ಅಭಿನಯದ 'ಪವರ್ ಸ್ಟಾರ್' ಚಿತ್ರದಲ್ಲಿ ಕೆಲ್ಲಿ ಡಾರ್ಜಿ, 'ರಣವಿಕ್ರಮ' ಚಿತ್ರದಲ್ಲಿ ವಿಕ್ರಮ್ ಸಿಂಗ್, 'ಅಂಜನೀಪುತ್ರ'ದಲ್ಲಿ ಮುಖೇತ್ ತಿವಾರಿ, 'ನಟಸಾರ್ವಭೌಮ' ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್ ಹೀಗೆ ಸಾಕಷ್ಟು ಪರಭಾಷೆಯ ಖಳನಟರು ಪುನೀತ್ ರಾಜ್ಕುಮಾರ್ ವಿರುದ್ಧ ಖಡಕ್ ವಿಲನ್ಗಳಾಗಿ ನಟಿಸಿದ್ದರು.
ಕಿಚ್ಚ ಸುದೀಪ್ ಸಿನಿಮಾಗಳಲ್ಲೂ ಹೆಚ್ಚಾಗಿ ಬಾಲಿವುಡ್ ಖಳ ನಟರ ದರ್ಬಾರ್ ಜೋರಾಗಿದೆ. 2002ರಲ್ಲಿ ಬಂದ 'ನಂದಿ' ಸಿನಿಮಾದಲ್ಲಿ ಸುದೀಪ್ ಎದುರು ವಿಲನ್ ಆಗಿ ಆಶೀಶ್ ವಿದ್ಯಾರ್ಥಿ ಅಬ್ಬರಿಸಿದ್ರು. ಅಲ್ಲಿಂದ ಸುದೀಪ್ ಬಹುತೇಕ ಚಿತ್ರಗಳಲ್ಲಿ ಪರಭಾಷೆಯ ವಿಲನ್ ಇದ್ದಾರೆ. ಅದಕ್ಕೆ ಸಾಕ್ಷಿಯಾಗಿ 'ಕೋಟಿಗೊಬ್ಬ 2' ಚಿತ್ರದಲ್ಲಿ ಮುಖೇಶ್ ತಿವಾರಿ, 'ಹೆಬ್ಬುಲಿ' ಚಿತ್ರದಲ್ಲಿ ಕಬೀರ್ ಸಿಂಗ್ ದುಹಾನ್, ರವಿ ಕಿಶನ್, 'ಪೈಲಾನ್' ಚಿತ್ರದಲ್ಲಿ, ಮತ್ತೆ ಕಬೀರ್ ಸಿಂಗ್ ದುಹಾನ್ , ಸುಶಾಂತ್ ಸಿಂಗ್ ಕಿಚ್ಚನ ಎದುರು ಆರ್ಭಟಿಸಿದ್ದರು.
'ಕೆಜಿಎಫ್' ಸಿನಿಮಾ ನಂತರ ವಿಶ್ವಾದ್ಯಂತ ಅಭಿಮಾನಿ ಬಳಗ ಹೊಂದಿರುವ ಯಶ್ ಅವರ ಸಿನಿಮಾಗಳಲ್ಲೂ ಪರಭಾಷೆಯ ಖಳನಟರು ಮಿಂಚಿದ್ದಾರೆ. 'ಗಜಕೇಸರಿ' ಸಿನಿಮಾದಲ್ಲಿ ಬಾಲಿವುಡ್ ನಟ ಶಾಬಾಜ್ ಖಾನ್ ಖಳನಟನಾಗಿ ಯಶ್ ಎದುರು ಮಿಂಚಿದ್ದರು. ಈಗ ಕೆಜಿಎಫ್ ಚಾಪ್ಟರ್ 2 ನಲ್ಲಿ ಬಾಲಿವುಡ್ ಖಳನಾಯಕ್ ಎಂದು ಖ್ಯಾತಿಯಾಗಿರುವ ಸಂಜಯ್ದತ್ ರಾಕಿ ಭಾಯ್ ಎದುರು ತೊಡೆ ತಟ್ಟಲಿದ್ದಾರೆ.
ಹಾಲಿವುಡ್ ನಟ ಮೋರ್ಗನ್ ಅಸ್ತೆ ನಾನು ನಟೋರಿಯಸ್ ಅಂತ ಡೈಲಾಗ್ ಹೇಳುತ್ತಿರುವ ಧ್ರುವಾ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಹಾಲಿವುಡ್ ನಟ ಮೋರ್ಗನ್ ಅಸ್ತೆ, ಭರ್ಜರಿ ಹುಡುಗನ ಎದುರು ಅಬ್ಬರಿಸಲಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಪೊಗರು ಚಿತ್ರದಲ್ಲಿ ಧ್ರುವನ ಮುಂದೆ ಪ್ರಪಂಚದ ಬಲಶಾಲಿ ನಟ ಮೋರ್ಗನ್ ಅಸ್ತೆ ಅಬ್ಬರ ಹೇಗಿರುತ್ತೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
ಇವರಷ್ಟೇ ಮಾತ್ರವಲ್ಲ ಸೋನು ಸೂದ್, ಅಮಿತ್ ತಿವಾರಿ, ರವಿಕಾಳೆ, ಸಯ್ನಾಜಿ ಶಿಂಧೆ, ಮಕರಂದ್ ದೇಶಪಾಂಡೆ ಹೀಗೆ ಅನೇಕ ನಟರು ಕನ್ನಡ ಸಿನಿಮಾಗಳಲ್ಲಿ ವಿಲನ್ಗಳಾಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.