ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ ಸಿನಿಮಾ ಕೆಜಿಎಫ್. ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಂಡು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ ಈ ಸಿನಿಮಾ. ಇನ್ನು ಕೆಜಿಎಫ್ ಭಾಗ 2 ರ ಶೂಟಿಂಗ್ ಕೂಡಾ ಸದ್ಯದಲ್ಲಿ ಆರಂಭವಾಗಲಿದೆ.
ಕೆಜಿಎಫ್ ಚಿತ್ರತಂಡ ಭಾಗ 2 ಶೂಟಿಂಗ್ಗೆ ರೆಡಿಯಾಗುತ್ತಿದೆ. ಇದಕ್ಕಾಗಿ ಚಿತ್ರತಂಡ ಮತ್ತಷ್ಟು ಕಲಾವಿದರ ಹುಡುಕಾಟದಲ್ಲಿದೆ. ಭಾಗ 2 ರಲ್ಲಿ ಬಿ ಟೌನ್ನ ಮುನ್ನಾಭಾಯ್ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗಾಸಿಪ್ ಸದ್ದು ಮಾಡಿತ್ತು. ಸಂಜಯ್ ದತ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಯಶ್ ಕೂಡಾ ಹೇಳಿದ್ದರು. ಆದರೆ ಇದುವರೆಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಇದೀಗ ಭಾಗ-2 ಕ್ಕೆ ಮತ್ತೊಂದು ಹೆಸರು ಕೇಳಿ ಬರುತ್ತಿದೆ. 90 ರ ದಶಕದಲ್ಲಿ ಬಾಲಿವುಡ್ ಆಳಿದ್ದ ರವೀನಾ ಟಂಡನ್ ಕೆಜಿಎಫ್-2 ರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 1999ರಲ್ಲಿ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಉಪೇಂದ್ರ' ಚಿತ್ರದ ಮೂಲಕ ಈ ಚೆಲುವೆ ಚಂದನವನಕ್ಕೆ ಕಾಲಿಟ್ಟಿದ್ದರು. ನಂತರ ಯಾವುದೇ ಕನ್ನಡ ಚಿತ್ರದಲ್ಲಿ ಈ ಮಸ್ತ್ ಹುಡುಗಿ ನಟಿಸಿರಲಿಲ್ಲ. ಈಗ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ರವೀನಾ ಟಂಡನ್ ಕೆಜಿಎಫ್-2 ಮೂಲಕ ಸ್ಯಾಂಡಲ್ವುಡ್ಗೆ ಬರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರವೀನಾ ಟಂಡನ್ ಪತಿ ಅನಿಲ್ ತಡಾನಿ ಹಿಂದಿ ಭಾಷೆಯಲ್ಲಿ ಕೆಜಿಎಫ್-1 ವಿತರಣೆ ಮಾಡಿದ್ದರು. ಭಾಗ-2 ನ್ನು ಕೂಡಾ ಇವರೇ ವಿತರಿಸುತ್ತಾರೆ ಎಂಬುದನ್ನು ಚಿತ್ರತಂಡ ಈಗಾಗಲೇ ಹೇಳಿದೆ. ಅಲ್ಲದೆ ಚಿತ್ರದಲ್ಲಿ ಬರುವ ರಮಿಕಾ ಸೇನ್ ಪಾತ್ರವನ್ನು ಇನ್ನೂ ರಿವೀಲ್ ಮಾಡಿಲ್ಲ. ಭಾಗ-2 ರಲ್ಲಿ ರಮಿಕಾ ಸೇನ್ ಪಾತ್ರಕ್ಕೆ ಬಹಳ ಮಹತ್ವವಿದ್ದು, ರವೀನಾ ಟಂಡನ್ ಈ ಪಾತ್ರ ಮಾಡಲಿದ್ದಾರೆ ಎಂಬ ಮಾತು ಬಿಟೌನ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಕೇಳಿ ಬರುತ್ತಿದೆ.