ನವದೆಹಲಿ:ಕೊರೊನಾ ವೈರಸ್ ಸಂದರ್ಭದಲ್ಲಿ ಸಾಮಾಜಿಕ ಸೇವೆಗಳ ಮೂಲಕ ಕೋಟ್ಯಂತರ ಜನರ ಮನಗೆದ್ದಿರುವ ಬಹುಭಾಷಾ ನಟ ಸೋನು ಸೂದ್, ಇದೀಗ ರಾಜಕೀಯಕ್ಕೆ ಲಗ್ಗೆ ಹಾಕಲಿದ್ದಾರಾ ಎಂಬ ಮಾತು ಜೋರಾಗಿ ಕೇಳಿ ಬರಲು ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ನಟ ನಾಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲೇ ಪಂಜಾಬ್, ಗೋವಾ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ನಡೆಯಲಿದ್ದು, ಅದರ ತಯಾರಿಯಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ ಕಾರ್ಯನಿರತವಾಗಿದೆ. ಪ್ರಮುಖವಾಗಿ ಪಂಜಾಬ್ನಲ್ಲಿ ಈಗಾಗಲೇ ರಾಜಕೀಯ ಅರಾಜಕತೆ ಉಂಟಾಗಿದ್ದು, ಇದರ ಲಾಭ ಪಡೆದುಕೊಳ್ಳಲು ಕೇಜ್ರಿ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ.
ಪಂಜಾಬ್ನಲ್ಲಿ ಈಗಾಗಲೇ ವಿಪಕ್ಷ ಸ್ಥಾನದಲ್ಲಿರುವ ಆಪ್, ಮುಂದಿನ ವರ್ಷದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡುವ ಇರಾದೆ ಇಟ್ಟುಕೊಂಡಿದೆ. ಆದರೆ, ಇದಕ್ಕಾಗಿ ಎಲ್ಲರಿಗೂ ಪರಿಚಿತವಿರುವ ವ್ಯಕ್ತಿಯ ಹುಡುಕಾಟದಲ್ಲಿ ಮಗ್ನವಾಗಿದೆ. ಇದೀಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಟ ಸೋನು ಸೂದ್ ಅವರನ್ನ ಭೇಟಿ ಮಾಡುತ್ತಿದ್ದು, ಪಕ್ಷಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಯಾವ ಕಾರಣಕ್ಕಾಗಿ ಅವರು ಭೇಟಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ರೀತಿಯ ಖಚಿತ ಮಾಹಿತಿ ಇಲ್ಲ.
ಇದನ್ನೂ ಓದಿರಿ: ಕಾಬೂಲ್ ಏರ್ಪೋರ್ಟ್ ಬಳಿ ಬಾಂಬ್ ಸ್ಫೋಟ, ಗುಂಡಿನ ದಾಳಿ; ಅನೇಕರು ಸಾವನ್ನಪ್ಪಿರುವ ಶಂಕೆ
ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಎರಡು ಬಣಗಳು ಹುಟ್ಟಿಕೊಂಡಿದ್ದು, ನವಜೋತ್ ಸಿಂಗ್ ಹಾಗೂ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ಮಧ್ಯೆ ಮುಂದಿನ ಚುನಾವಣೆ ಅಮರೀಂದರ್ ಸಿಂಗ್ ನೇತೃತ್ವದಲ್ಲೇ ನಡೆಯಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.