ಕನ್ನಡ ಸಿನಿರಂಗದ ಮೆಲೋಡಿ ಕಿಂಗ್, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪದ ತೀರ್ಪುಗಾರರಲ್ಲಿ ಒಬ್ಬರಾದ ರಾಜೇಶ್ ಕೃಷ್ಣನ್ ಅವರಿಗೆ ಇಂದು ಜನುಮದಿನದ ಸಂಭ್ರಮ.
ಸರಿಗಮಪ ಕಾರ್ಯಕ್ರಮದ ಮೂಲಕ ಕಿರುತೆರೆ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿರುವ ಮೆಲೋಡಿ ಕಿಂಗ್ ಸ್ವರ ಮಾಧುರ್ಯಕ್ಕೆ ಮನ ಸೋಲದವರಿಲ್ಲ. ಸುಮಧುರವಾದ ದನಿಯ ಮೂಲಕ ಚಂದನವನದ ತುಂಬಾ ಸಂಗೀತ ಸುಧೆಯನ್ನು ಹರಿಸಿದ ರಾಜೇಶ್ ಕೃಷ್ಣನ್ ಅವರು ಗೌರಿ ಗಣೇಶ ಸಿನಿಮಾದ ಮೂಲಕ ಹಿನ್ನೆಲೆ ಗಾಯಕರಾಗಿ ಕಾಣಿಸಿಕೊಂಡಿದ್ದರು.
ಕಳೆದ ಇಪ್ಪತ್ತು ವರುಷಗಳಿಂದ ಚಂದನವನದಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ರಾಜೇಶ್ ಕೃಷ್ಣನ್ ಇಲ್ಲಿಯ ತನಕ 5,000ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ. ಜೊತೆಗೆ 500 ತೆಲುಗು, 250 ತಮಿಳು ಮತ್ತು ಹಿಂದಿ ಹಾಡುಗಳನ್ನು ಕೂಡಾ ಇವರು ಹಾಡಿದ್ದಾರೆ.
ಸದ್ಯ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಬ್ಯುಸಿಯಾಗಿರುವ ಇವರು ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಕಾನ್ಫಿಡೆಂಟ್ ಸ್ಟಾರ್ ಸಿಂಗರ್, ಮ್ಯೂಕ್ನ ಸೂಪರ್ ಸ್ಟಾರ್ ಜೊತೆಗೆ ಟಿವಿ 9ನ ವಾಯ್ಸ್ ಆಫ್ ಬೆಂಗಳೂರು ಸಂಗೀತ ಕಾರ್ಯಕ್ರಮದ ತೀರ್ಪುಗಾರರಾಗಿ ಮಿಂಚಿದ್ದಾರೆ.