'ದಿ ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ' ಎಂದೇ ಬಿರುದು ಪಡೆದಿರುವ ಹೆಮ್ಮೆಯ ಕನ್ನಡಿಗ ಗಿರೀಶ್ ಭಾರದ್ವಾಜ್ ಅವರ ಬಗ್ಗೆ ಕೇಳಿರಬಹುದು. ದೇಶಾದ್ಯಂತ 240ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿ, ಮೂರು ಲಕ್ಷಕ್ಕೂ ಹೆಚ್ಚು ಜನರ ಕನಸು, ಬದುಕು ಮತ್ತು ಭಾವನೆಗಳಿಗೆ ತೂಗುಸೇತುವೆಗಳನ್ನು ನಿರ್ಮಿಸುವುದರ ಮೂಲಕ ದೇಶಾದ್ಯಂತ 139 ತೂಗುಸೇತುವೆಗಳನ್ನು ಕಟ್ಟಿ ದಾಖಲೆ ನಿರ್ಮಿಸಿದ್ದಾರೆ.
ಲಕ್ಷಾಂತರ ಬದುಕುಗಳನ್ನು ಕಟ್ಟಿದ ಗಿರೀಶ್ ಭಾರದ್ವಾಜ್ ಕುರಿತು ಬಯೋಪಿಕ್ - Hanging bridge in India
ದೇಶಾದ್ಯಂತ ಸುಮಾರು 139 ತೂಗು ಸೇತುವೆಗಳನ್ನು ಕಟ್ಟುವ ಮೂಲಕ 'ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ' ಎಂದೇ ಬಿರುದು ಪಡೆದ ಗಿರೀಶ್ ಭಾರಧ್ವಾಜ್ ಜೀವನ ಈಗ ಸಿನಿಮಾವಾಗಿ ತಯಾರಾಗುತ್ತಿದೆ. ಇತ್ತೀಚೆಗೆ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದ್ದು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಈ ಹೆಮ್ಮೆಯ ಕನ್ನಡಿಗನ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರವು ಕೆಲವು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈಗ ಈ ಗಿರೀಶ್ ಭಾರದ್ವಾಜ್ ಅವರ ಕುರಿತು ಒಂದು ಬಯೋಪಿಕ್ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸಂತೋಷ್ ಕೊಡಂಕೇರಿ ನಿರ್ದೇಶಿಸುತ್ತಿದ್ದಾರೆ. ಬರೀ ನಿರ್ದೇಶನವಷ್ಟೇ ಅಲ್ಲ, ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಅವರೇ ರಚಿಸಿದ್ದಾರೆ. ಚಿತ್ರಕ್ಕೆ 'ದಿ ಬ್ರಿಡ್ಜ್ ಮ್ಯಾನ್' ಎಂದು ಹೆಸರಿಡಲಾಗಿದೆ. ಸದ್ಯಕ್ಕೆ ಈ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಗಿರೀಶ್ ಭಾರದ್ವಾಜ್ ಅವರ ಪಾತ್ರಕ್ಕೆ ಸೂಕ್ತ ಕಲಾವಿದರ ಹುಡುಕಾಟ ನಡೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ವಿನಯ್ ಶರ್ಮ ಎನ್ನುವವರು ಸಂಗೀತ ಸಂಯೋಜಿಸುತ್ತಿದ್ದಾರೆ.