ತಮಿಳು ದಳಪತಿ ಖ್ಯಾತಿಯ ವಿಜಯ್ ನಟಿಸಿರುವ ಬಿಗಿಲ್ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಮೊನ್ನೆ ಅಂದ್ರೆ ಅಕ್ಟೋಬರ್ 27ಕ್ಕೆ ರಿಲೀಸ್ ಆಗಿರುವ ಬಿಗಿಲ್ ಚಿತ್ರ ಕೇವಲ ಮೂರೇ ದಿನಕ್ಕೆ ನೂರು ಕೋಟಿಯನ್ನು ತನ್ನದಾಗಿಸಿಕೊಂಡಿದೆ.
ಸಿನಿಮಾಕ್ಕೆ ಅಟ್ಲಿ ನಿರ್ದೇಶನವಿದ್ದು, ಈ ಚಿತ್ರವನ್ನು ಸೇರಿದಂತೆ ಅಟ್ಲಿ ಮೂರು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ನಿರ್ದೇಶನ ಮಾಡಿದ್ದ, 'ತೇರಿ' ಮತ್ತು 'ಮಾರ್ಷಲ್' ಕೂಡ ಬಿಗ್ ಹಿಟ್ ಆಗಿದ್ದವು.
ಬಿಗಿಲ್ ಸಿನಿಮಾದಲ್ಲಿ ವಿಜಯ್ ದಳಪತಿ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಂದೆ ಮಗನಾಗಿ ನಟಿಸಿದ್ದಾರೆ. ಈ ಸಿನಿಮಾ ಕ್ರೀಡೆ ಸಂಬಂಧಿಸಿದ್ದು, ಚಿತ್ರದಲ್ಲಿ ವಿಜಯ್ ಫುಟ್ ಬಾಲ್ ಕೋಚ್ ಆಗಿ ಪಾತ್ರ ನಿರ್ವಹಿಸಿದ್ದಾರೆ.
ಬಿಗಿಲ್ ಬಿಡುಗಡೆಯಾದ ಮೊದಲ ದಿನವೇ ಚೆನ್ನೈ ಒಂದರಲ್ಲೇ 2 ಕೋಟಿ ಗಳಿಸಿದ್ದು, ತಮಿಳುನಾಡಿನಲ್ಲಿ 23 ಕೋಟಿ ಗಳಿಸಿತ್ತು. ಅಲ್ಲದೆ ವಿಶ್ವದಾದ್ಯಂತೆ ರಿಲೀಸ್ ಆದ ಮೊಟ್ಟ ಮೊದಲ ದಿನವೇ ಬರೋಬ್ಬರಿ 50 ಕೋಟಿ ತನ್ನದಾಗಿಸಿಕೊಂಡಿದ್ದ ಬಿಗಿಲ್, ಮೂರು ದಿನಕ್ಕೆ 100 ಕೋಟಿಯತ್ತ ನಡೆದಿದೆ.
ಈ ಬಗ್ಗೆ ಸಿನಿಮಾ ವಿಮರ್ಶಕ ರಮೇಶ್ ಬಾಲ ಟ್ವೀಟ್ ಮಾಡಿದ್ದು, ಬಿಗಿಲ್ ಸಿನಿಮಾ ವರ್ಲ್ಡ್ ವೈಡ್ 100 ಕೋಟಿಯನ್ನು ದಾಟಿದೆ. ಅಭಿನಂದನೆಗಳು ಎಂದಿದ್ದಾರೆ.