ಸರ್ಕಾರಿ ಆಸ್ಪತ್ರೆ ಎಂದರೆ ಆಕಡೆ ತಿರುಗಿ ನೋಡುವುದಕ್ಕೂ ಹಿಂಜರಿಯುವವರ ಮಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲೊಬ್ಬರು ಹೆರಿಗೆ ಮಾಡಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ಕಳೆದ ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ ಅಕ್ಷತಾ ಅವರು ಮಗುವನ್ನು ಪಡೆದಿದ್ದಾರೆ. ಹಾಗೆಯೇ, ಸರ್ಕಾರಿ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಡೆಲಿವರಿ ಮಾಡಿಸಿಕೊಂಡ ಅಕ್ಷತಾ ಹೀಗೆ ಬರೆಯುತ್ತಾರೆ.....ಮಕ್ಕಳ ವಿಷ್ಯದಲ್ಲಿ ತಮಾಷೆನಾ....! ನಿಜ್ವಾಗ್ಲೂ ಸರ್ಕಾರಿ ಆಸ್ಪತ್ರೆ ಯೋಚನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿಯೇ ಒಳ್ಳೆಯ ಹಾಸ್ಪಿಟಲ್ಅಲ್ಲಿ ತೋರಿಸಬೇಕು... ಕಾಸು ಕೊಟ್ಟಂತೆ ಕಜ್ಜಾಯ, ಏನೋ ಮಾಡೋಕೆ ಹೋಗಿ ಇನ್ನೇನೋ ಆಗಿಬಿಟ್ಟರೆ... ಅಡ್ಡ ದಿಡ್ಡಿ ನಾರ್ಮಲ್ ಮಾಡಿ ಕಳಿಸ್ತಾರೆ ಅದು ತಡೆದುಕ್ಕೊಳ್ಳೋ ಶಕ್ತಿ ಇರ್ಬೇಕು, ಡಿಲಿವರಿ ಏನೋ ಆಗುತ್ತೆ ಮುಂದೆ ಮಗುವಿನ ಆರೈಕೆ, ಹಾಲುಣಿಸುವ ಬಗ್ಗೆ ಎಲ್ಲಾ ಏನೂ ಹೇಳಲ್ಲ.. ಎಲ್ಲೆಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್ ಬೇಡ್ವಾ ...ಅಬ್ಬಾ ಹೀಗೆ ನಾನು ನನ್ನ ಡಿಲಿವರಿ ನಮ್ಮೂರಿನ ಸರ್ಕಾರಿ ಆಸ್ಪತ್ರೆಲೇ ಅಂತಾ ನಿರ್ಧಾರ ಮಾಡಿದಾಗ ಕೇಳಿಸಿದ ಮಾತು ಒಂದೋ, ಎರಡೊ ಅಂತಾರೆ ಅಕ್ಷತಾ...39ನೇ ವಾರ ತುಂಬುತ್ತಿದ್ದ ಹಾಗೆ ಊರಿಗೆ ಬಂದ ನನಗೆ ಎಲ್ಲವೂ ಎಷ್ಟು ಸರಳವಾಗಿ, ಸುಲಲಿತವಾಗಿ ಆಗಿ ಹೋಯಿತು ಅಂದ್ರೆ ಊರಿಗೆ ಬಂದ ಒಂದೇ ವಾರದಲ್ಲಿ ಮಗಳು ಹುಟ್ಟಿದಳು.
ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡವು ಮಾನಸಿಕವಾಗಿ ನನ್ನನ್ನು ತಯಾರು ಮಾಡಿ, ಬಹಳ ಜಾಗ್ರತೆಯಿಂದ ತಮ್ಮ ಕಾರ್ಯ ಮಾಡಿ ಹೆಣ್ಣು ಮಗು ಎಂಬ ವಿಶೇಷವನ್ನು ಹೇಳಿದಾಗಲೇ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆ. ಅದು ಅಲ್ಲದೆ ನಮ್ಮೂರ ಸರ್ಕಾರಿ ಆಸ್ಪತ್ರೆಯ ಮೇಲೆ ಇನ್ನೂ ಹೆಚ್ಚು ಗೌರವ ಅನಿಸಿತು.
ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಅಂದ್ರೆ ನಾವ್ಯಾಕೆ ಹಿಂದೆ ಮುಂದೆ ನೋಡದೆ ಆತುರದ ನಿರ್ಧಾರ ತೆಗೆದುಕೊಳ್ಳಬೇಕು. ನಾವೇ ಹಿಂಜರಿದರೆ ಇನ್ನೂ ಕೆಲ ಜನ ಹಿಂಜರಿದು ದೊಡ್ಡ ಆಸ್ಪತ್ರೆ, ದೊಡ್ಡ ಶಾಲೆ ಅಂತಾ ಹೋಗುವ ಬದಲು ಅನುಭವ ಪಡೆಯುವುದು ಮುಖ್ಯ. ನಿಜವಾಗಿಯೂ ಒಳ್ಳೆಯ ಸೌಕರ್ಯ, ಸವಲತ್ತುಗಳು ಇರುವುದು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿಯೇ, ಅದನ್ನು ಬಳಸಿಕೊಳ್ಳುವುದು ನಮ್ಮ ಕರ್ತವ್ಯ ಎನ್ನುತ್ತಾರೆ ಅಕ್ಷತಾ ಪಾಂಡವಪುರ.