ಸ್ಯಾಂಡಲ್ವುಡ್ ನಟ, ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಈ ವಾರಾಂತ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಮನೆಗೆ ಬೇರೆ ನಿರೂಪಕರು ಬರುವ ಸಾಧ್ಯತೆ ದಟ್ಟವಾಗಿದೆ.
ಈ ವಾರಾಂತ್ಯದ 'ವಾರದ ಕಥೆ ಕಿಚ್ಚನ ಜೊತೆ' ಹಾಗೂ ಸೂಪರ್ 'ಸಂಡೇ ವಿತ್ ಸುದೀಪ್' ಕಾರ್ಯಕ್ರಮ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದರು. ಆದರೆ, ಇದೀಗ ಅವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿರುವ ಕಾರಣ ಈ ವಾರಂತ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ವಾಹಿನಿಯ ಮೂಲಗಳು ತಿಳಿಸಿವೆ.
ಬಿಗ್ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಪ್ರತಿ ಶನಿವಾರ 2 ಎಪಿಸೋಡ್ಗಳ ಶೂಟಿಂಗ್ ನಡೆಯುತ್ತಿತ್ತು. ಆದರೆ, ಇದೀಗ ಸುದೀಪ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವಾಹಿನಿ ಮೂಲಗಳ ಪ್ರಕಾರ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಚಟುವಟಿಕೆ ನೀಡಲಿದ್ದು, ಎಂದಿನಂತೆ ಭಾನುವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಆದರೆ, ನಿರೂಪಣೆಗಾಗಿ ಯಾರನ್ನು ಕರೆಯಿಸಬೇಕು ಅಥವಾ ಕರೆಯಿಸಬಾರದು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ, ಭಾನುವಾರ ಎಲಿಮಿನೇಷನ್ ಕಾರ್ಯಕ್ರನ ನಡೆಯದಿದ್ದರೆ, ಮುಂದಿನ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲಿದ್ದಾರೆ.
ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆ ಹಾಗೂ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಂಡಿದ್ದು, ಸುದೀಪ್ ಅವರು ಶೂಟಿಂಗ್ಗೆ ಹಾಜರಾಗುತ್ತಿಲ್ಲ. ಪ್ರತಿ ಶನಿವಾರದಂದು ಸುದೀಪ್ ಸೇರಿದಂತೆ ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ವಾರಂತ್ಯದ ಕಾರ್ಯಕ್ರಮಗಳಿಗೆ ತೆರಳುವ ಪ್ರತಿಯೊಬ್ಬರಿಗೂ ಆರ್ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲಾಗುತ್ತಿತ್ತು.