ಕೆಲವು ತಿಂಗಳ ಹಿಂದಷ್ಟೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಪೈಪೋಟಿ ನಡೆಸಿ, ಬಿಡುಗಡೆ ದಿನಾಂಕವನ್ನು ಫಿಕ್ಸ್ ಮಾಡಿದ್ದ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರು ಈಗ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಹಲವರು ಇಂತಹ ಸಂದರ್ಭದಲ್ಲಿ ತಮ್ಮ ಚಿತ್ರದ ಬಿಡುಗಡೆ ಬೇಡ ಎಂದು ಪೋಸ್ಟ್ಪೋನ್ ಮಾಡುವುದಕ್ಕೆ ಮುಂದಾಗಿದ್ದಾರೆ.
ಬಿಗ್ ಬಜೆಟ್ ಚಿತ್ರಗಳ ಪೈಕಿ ಈಗಾಗಲೇ ಪೊಗರು, ರಾಬರ್ಟ್ ಮತ್ತು ಯುವರತ್ನ ಚಿತ್ರಗಳು ಬಿಡುಗಡೆಯಾಗಿವೆ. ಮೊದಲೆರೆಡು ಚಿತ್ರಗಳು ಯಾವುದೇ ಸಮಸ್ಯೆ ಇಲ್ಲದೇ ಬಿಡುಗಡೆಯಾಗಿವೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಅವಕಾಶ ಮಾಡಿ ಕೊಟ್ಟಿದ್ದು, ಇದರ ಪೆಟ್ಟು ಯುವರತ್ನ ಸಿನಿಮಾದ ಮೇಲೆ ಬಿದ್ದಿದೆ.
ಮುಂದಿನ ದಿನಗಳಲ್ಲಿ ಸಲಗ, ಕೋಟಿಗೊಬ್ಬ-3 ಮತ್ತು ಭಜರಂಗಿ-2 ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಪ್ರಮುಖವಾಗಿ ಸಲಗ ಚಿತ್ರವು ಏ. 15ಕ್ಕೆ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿತ್ತು. ಕೋಟಿಗೊಬ್ಬ 3 ಚಿತ್ರವು ಈ ತಿಂಗಳ ಕೊನೆಗೆ ಬಿಡುಗಡೆಯಾದರೆ, ಅದಾಗಿ 15 ದಿನಗಳ ನಂತರ ಭಜರಂಗಿ 2 ಚಿತ್ರ ಬಿಡುಗಡೆಯಾಗಬೇಕಿತ್ತು. ಈಗ ಶೇ. 50ರಷ್ಟು ಹಾಜರಾತಿಯಿಂದ ಸಲಗ ಚಿತ್ರ ಮುಂದಕ್ಕೆ ಹೋಗಲಿದೆ ಎನ್ನಲಾಗುತ್ತಿದೆ.