ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಪುತ್ರ ಸಾಯಿ ಕೃಷ್ಣ ಸುಮಾರು 12 ವರ್ಷಗಳಿಂದ 450 ಕ್ಕೂ ಹೆಚ್ಚು ಸಿನಿಮಾಗಳಿಗೆ ಡಿಸೈನರ್ ಆಗಿ ಕೆಲಸ ಮಾಡಿದವರು. 'ಕ' ಎಂಬ ಕನ್ನಡ ಚಿತ್ರವನ್ನು ಕೂಡಾ ಅವರು ನಿರ್ದೇಶಿಸಿದ್ದಾರೆ. ಆದರೆ ಸಿನಿಮಾ ಅವರ ಕೈ ಹಿಡಿಯಲಿಲ್ಲ.
ಸಾಯಿಕೃಷ್ಣ ಇದೀಗ 'ಕಿವಿಕೊಟ್ಟು ಕೇಳಿ' ಎಂಬ ಪಾಡ್ ಕಾಸ್ಟ್ ಪ್ರಾರಂಭ ಮಾಡಿದ್ದಾರೆ. ಸಾಯಿಕೃಷ್ಣ ಅವರ ಫೇಸ್ಬುಕ್ನಲ್ಲಿ ಇದು ಲಭ್ಯವಿದೆ. ಪಾಡ್ ಕಾಸ್ಟ್ ಎರಡನೇ ಕಂತಿನಲ್ಲಿ ಸಾಯಿಕೃಷ್ಣ ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಅವರನ್ನು ಕೋಪದ ವಿಚಾರವಾಗಿ ಮಾತನಾಡಿಸಿದ್ದಾರೆ. ಇದರಲ್ಲಿ ಶೈನಿ ಶೆಟ್ಟಿ ಹೇಳುವ ಪ್ರಕಾರ ಅವರು ಜೀವನದಲ್ಲಿ ಎರಡೇ ಬಾರಿ ಬಹಳ ಕೋಪ ಮಾಡಿಕೊಂಡಿದ್ದಂತೆ. ಒಮ್ಮ ಸಾಯಿಕೃಷ್ಣ ಅವರ ಮೇಲೆ ಕೋಪ ಬಂದದ್ದನ್ನು ಹೇಳಿಕೊಂಡಿದ್ದಾರೆ.
ಮಂಗಳೂರು ಮೂಲದ ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7 ವಿಜೇತರಾಗುವುದಕ್ಕೂ ಮುನ್ನ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಖ್ಯಾತಿ ಪಡೆದವರು. 2016 ರಿಂದ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಬಂದಿದ್ದಾರೆ. ಸದ್ಯಕ್ಕೆ ರಿಷಭ್ ಶೆಟ್ಟಿ ಅವರ 'ರುದ್ರಪ್ರಯಾಗ' ಚಿತ್ರಕ್ಕೆ ಕೂಡಾ ಆಯ್ಕೆ ಆಗಿದ್ದಾರೆ.
ಸಾಯಿಕೃಷ್ಣ ಅವರೊಂದಿಗೆ ಮಾತನಾಡುವಾಗ ಒಮ್ಮೆ ತನ್ನಿಂದ ತನ್ನ ಅಪ್ಪನಿಗೆ ಕೋಪ ಬಂದಿದ್ದನ್ನು ನೆನಪಿಸಿಕೊಂಡರು. ಅಲ್ಲದೆ ಒಮ್ಮೆ ಶೈನ್ ತಮ್ಮ ಸ್ನೇಹಿತರೊಂದಿಗೆ ಎಸಿ ಬಸ್ನಲ್ಲಿ ಪ್ರಯಾಣಿಸುವಾಗ ಎಸಿ ಆನ್ ಆಗದೆ ಇದ್ದಾಗ ಬಸ್ ಚಾಲಕನ ಮೇಲೆ ಕೋಪ ಮಾಡಿಕೊಂಡಿದ್ದರಂತೆ. ಇದೆಲ್ಲಕ್ಕಿಂತ ಹೆಚ್ಚಾಗಿ 'ಕ' ಚಿತ್ರ ಬಿಡುಗಡೆ ಆದ ಮರುದಿನ ಸುಮಾರು 500 ವ್ಯಕ್ತಿಗಳಿಗೆ ಸಿನಿಮಾ ನೋಡಲು ಥಿಯೇಟರ್ನಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿ ಪ್ರದರ್ಶನವಾಗಿದ್ದು ಬೇರೆ ಚಿತ್ರ. 'ಕ' ಚಿತ್ರಕ್ಕೆ ಪ್ರೇಕ್ಷಕರು ಇಲ್ಲ ಎಂಬ ಕಾರಣಕ್ಕೆ ಒಂದೇ ದಿನದಲ್ಲಿ ಥಿಯೇಟರ್ನಿಂದ ತೆಗೆಯಲಾಗಿತ್ತು. ಈ ಘಟನೆಯಿಂದ ಶೈನ್ ಶೆಟ್ಟಿಗೆ ಸಾಯಿಕೃಷ್ಣ ಮೇಲೆ ಬಹಳ ಕೋಪ ಬಂದಿತ್ತಂತೆ.
ಹೀಗೆ ಶೈನ್ ಶೆಟ್ಟಿ ಹಳೆಯ ದಿನಗಳನ್ನು ನಿರ್ದೇಶಕ ಸಾಯಿಕೃಷ್ಣ ಅವರೊಂದಿಗೆ ಹಂಚಿಕೊಂಡಿದ್ದಾರೆ.