ಹೊಸದಾಗಿ ಸ್ಥಾಪನೆ ಆಗಿರುವ 'ನಮ್ಮ ಫ್ಲಿಕ್ಸ್' ಇತ್ತೀಚೆಗಷ್ಟೇ ಹೊಸ ವರ್ಷನ್ ಕೂಡಾ ಬಿಡುಗಡೆ ಮಾಡಿತ್ತು. ಇದೀಗ 'ನಮ್ಮ ಫ್ಲಿಕ್ಸ್'ನಲ್ಲಿ ಮೊದಲ ಬಾರಿಗೆ 'ಭ್ರಮೆ' ಸಿನಿಮಾ ಬಿಡುಗಡೆಯಾಗುತ್ತಿದ್ದು ಈ ಮೂಲಕ ಸಿನಿಮಾ ವ್ಯಾಪರಕ್ಕೂ ಕಾಲಿಟ್ಟಿದೆ.
ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಿಂದ 'ನಮ್ಮ ಫ್ಲಿಕ್ಸ್'ನಲ್ಲಿ ಕೇವಲ 99 ರೂಪಾಯಿಯಲ್ಲಿ ವಿಶ್ವಾದ್ಯಂತ ಆಸಕ್ತರು ಸಿನಿಮಾ ನೋಡಲು ಲಭ್ಯವಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿಜಯ್ ಪ್ರಕಾಶ್ ಹೇಳಿದ್ದಾರೆ. ಕಳೆದ 15 ವರ್ಷಗಳಿಂದ ಮನರಂಜನಾ ಪ್ರಪಂಚದಲ್ಲಿ ತೊಡಗಿಕೊಂಡಿರುವ ವಿಜಯಪ್ರಕಾಶ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕನ್ನಡ ಭಾಷೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಪಸರಿಸಲು ಒಂದು ತಂಡ ಕಟ್ಟಿಕೊಂಡು ಈಗ 'ನಮ್ಮ ಫ್ಲಿಕ್ಸ್' ಮೂಲಕ ಆಗಮಿಸಿದ್ದಾರೆ.
ವಿಜಯಪ್ರಕಾಶ್ ಒಬ್ಬ ಶಿಕ್ಷಕರ ಪುತ್ರ. ಸರಿಯಾದ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬೇಕು ಎಂದು ನನ್ನ ತಂದೆ ಹೇಳಿಕೊಟ್ಟಿದ್ದಾರೆ. ಅದನ್ನೇ ಈಗ ನಾನು ಮಾಡುತ್ತಿರುವುದು ಕನ್ನಡಿಗರಿಗಾಗಿ 'ನಮ್ಮ ಫ್ಲಿಕ್ಸ್' ಹೊರಬಂದಿದೆ. ಇಲ್ಲಿ ಸಿನಿಮಾ ವೀಕ್ಷಿಸುವ ಪ್ರೇಕ್ಷಕರಿಗೆ ಬಹುಮಾನ ಕೂಡಾ ದೊರೆಯಲಿದೆ ಎನ್ನುತ್ತಾರೆ ವಿಜಯ್ ಪ್ರಕಾಶ್.
99 ರೂಪಾಯಿ ಟಿಕೆಟ್ನಲ್ಲಿ ಶೇ.70 ರಷ್ಟು ನಿರ್ಮಾಪಕರಿಗೆ ದೊರೆಯಲಿದೆ. ನವೆಂಬರ್ 1 ವೇಳೆಗೆ ಸುಮಾರು 1.50 ಲಕ್ಷ ಮಂದಿ ನಮ್ಮ ಫ್ಲಿಕ್ಸ್ ಬಳಕೆದಾರರನ್ನು ಹೊಂದುವ ಸಾಧ್ಯತೆ ಇದೆ. ಇಂದಿನ ಸ್ಥಿತಿಯಲ್ಲಿ ನಿರ್ಮಾಪಕರಿಗೆ ಶೇ.70ರಷ್ಟು ಹಣ ದೊರೆಯುತ್ತಿರುವುದು ಬಹಳ ದೊಡ್ಡ ವಿಚಾರ ಎನ್ನುತ್ತಾರೆ ವಿಜಯ್ ಪ್ರಕಾಶ್. ಇನ್ನು ಹಣ ಪಾವತಿಸಿ 10 ದಿನದೊಳಗೆ ವೀಕ್ಷಕರು ಸಿನಿಮಾ ವೀಕ್ಷಿಸಬಹುದು. ಇದರಿಂದ ಪೈರಸಿ ಕೂಡಾ ತಪ್ಪುತ್ತದೆ ಎಂಬುದು ವಿಜಯ್ ಪ್ರಕಾಶ್ ಅಭಿಪ್ರಾಯ.
ಇನ್ನು 'ನಮ್ಮ ಫ್ಲಿಕ್ಸ್'ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ 'ಭ್ರಮೆ' ನಿರ್ದೇಶಕ ಚರಣ್ ರಾಜ್ ಮಾತನಾಡಿ, ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆ ಮಾಡಲು 20 ಲಕ್ಷ ಖರ್ಚು ಮಾಡಬೇಕು. ಆದರೆ ನಾವು ಅದೇ ಹಣವನ್ನು 'ನಮ್ಮ ಫ್ಲಿಕ್ಸ್' ವೀಕ್ಷಕರ ಸಂತೋಷಕ್ಕಾಗಿ ಬಹುಮಾನ ನೀಡಲು ಬಳಸುತ್ತಿದ್ದೇವೆ. ಅಂತಹ ಯೋಜನೆ ತಂಡಕ್ಕೆ ಮತಷ್ಟು ಹುರುಪು ತರಲಿದೆ ಎನ್ನುತ್ತಾರೆ.