'ಕಿನ್ನರಿ' ಧಾರಾವಾಹಿಯಲ್ಲಿ ಮಣಿಯಾಗಿ ನಟಿಸಿ ಮನೆ ಮಾತಾಗಿರುವ ನಟಿ ಭೂಮಿ ಶೆಟ್ಟಿ ಬಿಗ್ ಬಾಸ್ಗಾಗಿ ತೆಲುಗು ಸೀರಿಯಲ್ 'ನಿನ್ನೇ ಪೆಲ್ಲಡಾತಾ'ವನ್ನು ಮಧ್ಯದಲ್ಲಿ ಬಿಟ್ಟು ಬಂದಿದ್ದರು.
ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಮಜಾ ಭಾರತದ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಇವರು ಮಗದೊಮ್ಮೆ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅತ್ತಾರಿಂಟ್ಲೋ ಅಕ್ಕ ಚೆಲ್ಲಲು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತೆಲುಗು ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಅಂದ ಹಾಗೆ, ಇಲ್ಲಿಯ ತನಕ ಚೈತ್ರಾ ರೈ ಅವರು ನಿರ್ವಹಿಸುತ್ತಿದ್ದ ಪಾತ್ರವನ್ನು ಇನ್ನು ಮುಂದೆ ಭೂಮಿ ಶೆಟ್ಟಿ ಮಾಡಲಿದ್ದಾರೆ.
"ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲು ನಿನ್ನೇ ಪೆಲ್ಲಾಡಾತಾ ಧಾರಾವಾಹಿಯಿಂದ ಹೊರಬರಬೇಕಾಯಿತು. ನಂತರ ನಾನು ಉತ್ತಮ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದೆ. ಅತ್ತಾರಿಂಟ್ಲೋ ಅಕ್ಕ ಚೆಲ್ಲಲು ಆಫರ್ ಬಂತು. ಯಾಕೋ ಆಸಕ್ತಿದಾಯಕವಾಗಿತ್ತು. ಆಗಲೇ ಯಾರೋ ನಿರ್ವಹಿಸಿದ ಪಾತ್ರವನ್ನು ಮಾಡುವುದೆಂದರೆ ಸವಾಲಿದೆ ಎಂದು ನನಗೆ ಗೊತ್ತು. ನನ್ನ ಹಾಗೂ ಚೈತ್ರ ಮಧ್ಯೆ ವೀಕ್ಷಕರು ಹೋಲಿಕೆ ಮಾಡುತ್ತಾರೆ. ಆದರೆ ನಾನು ಈ ಸವಾಲನ್ನು ತೆಗೆದುಕೊಳ್ಳುತ್ತೇನೆ. ನಾನು ಆ ಪಾತ್ರಕ್ಕೆ ನ್ಯಾಯ ನೀಡಿ ವೀಕ್ಷಕರನ್ನು ಗಮನ ಸೆಳೆಯುವೆನೆಂಬ ನಂಬಿಕೆ ಇದೆ. ಜನವರಿ 3 ರಿಂದ ಹೈದರಾಬಾದಿನಲ್ಲಿ ಶೂಟಿಂಗ್ ಆರಂಭವಾಗಲಿದೆ" ಎಂದಿದ್ದಾರೆ ಭೂಮಿ ಶೆಟ್ಟಿ.
ಮಜಾ ಭಾರತ ಶೋವನ್ನು ನಿರೂಪಿಸುವ ಮೂಲಕ ಮೊದಲ ಬಾರಿಗೆ ನಿರೂಪಣೆಗೆ ಇಳಿದಿರುವ ಭೂಮಿ "ನಿರೂಪಣೆ ನಾನು ನನ್ನ ಕೆರಿಯರ್ ನಲ್ಲಿ ಈ ಮೊದಲು ಪ್ರಯತ್ನ ಮಾಡಿರಲಿಲ್ಲ. ಜನ ನನ್ನನ್ನು ನಿರೂಪಕಿಯಾಗಿ ಒಪ್ಪಿದ್ದಾರೆ" ಎಂದು ಸಂತಸದಿಂದ ಹೇಳುವ ಭೂಮಿ ಇಕ್ಕಟ್ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ.