ಶಿವಮೊಗ್ಗ: ಜಿ.ಕೆ. ಆದಿ ನಿರ್ದೇಶನದ 'ಭಾನು ವೆಡ್ಸ್ ಭೂಮಿ' ಒಂದು ನೈಜ ಘಟನೆಯನ್ನಿಟ್ಟುಕೊಂಡು ಚಿತ್ರಿಸಲಾಗಿದೆ. ಭಾನು ಹಾಗೂ ಭೂಮಿ ಎಂಬ ಪಾತ್ರಧಾರಿಗಳು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರೂ ಇಬ್ಬರೂ ಒಂದಾಗುವುದು ಮಾತ್ರ ಸಾಧ್ಯವಾಗದೇ ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದೇ ಈ ಕಥೆಯ ಮುಖ್ಯ ತಿರುಳಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಯಾವುದೇ ಅನಾವಶ್ಯಕ ದೃಶ್ಯಗಳಿಲ್ಲ. ಅನಾವಶ್ಯಕ ಹಾಡುಗಳಿಲ್ಲ. ಯಾವ ಮಚ್ಚು ಲಾಂಗೂ ಇಲ್ಲ. ಇದೊಂದು ನವಿರಾದ ಅಪ್ಪಟ ಪ್ರೇಮಕಥೆ.
ಆಗಸ್ಟ್ 2 ರಂದು ತೆರೆಗೆ ಬರಲಿದೆ 'ಭಾನು ವೆಡ್ಸ್ ಭೂಮಿ' - undefined
ಶುದ್ಧ ಪ್ರೇಮದ ಕಥಾ ಹಂದರವಿರುವ 'ಭಾನು ವೆಡ್ಸ್ ಭೂಮಿ' ಸಿನಿಮಾ ಆಗಸ್ಟ್ 2 ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಜಿ.ಕೆ. ಆದಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಭಾಗವಹಿಸಿದ್ದರು.
ಚಿತ್ರದಲ್ಲಿ ಮೂರು ಹಾಡುಗಳಿವೆ. ರಂಗಾಯಣ ರಘು ಕೂಡಾ ಚಿತ್ರಕ್ಕಾಗಿ ಹಾಡು ಹಾಡಿದ್ದಾರಂತೆ. ಕಿಶೋರ್ ಶೆಟ್ಟಿ ಈ ಚಿತ್ರದ ನಿರ್ಮಾಪಕರಾಗಿದ್ದು ಗಣೇಶ್ ಹೆಗ್ಡೆ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಸೂರ್ಯಪ್ರಭ್, ರಿಶಿತಾ ಮಲ್ನಾಡ್, ಮೈಕೋ ಮಂಜು, ಪ್ರಗತಿ ಸೇರಿದಂತೆ ಹಲವರು ನಟಿಸಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಅಜ್ಜಿ ಪಾತ್ರ ಮಾಡಿರುವ ಶಿಲ್ಪಾಮೂರ್ತಿ ಮಾತನಾಡಿ, ನನ್ನ ಪಾತ್ರ ವಿಶೇಷವಾಗಿದೆ. ಮಾರ್ಡನ್ ಅಜ್ಜಿ ನಾನು ಎಂದರು. ರಿಶಿತಾ ಮಾತನಾಡಿ, ಇದರಲ್ಲಿ ನಾನು ನಾಯಕಿಯಾಗಿ ಅಭಿನಯಿಸಿದ್ದೇನೆ. ಇದೊಂದು ಅಪ್ಪಟ ಲವ್ ಸ್ಟೋರಿ. ಯುವಜನಾಂಗಕ್ಕೆ ಸಂದೇಶ ಇರುವ ಚಿತ್ರ ಎಂದರು. ನಟ ಸೂರ್ಯಪ್ರಭ್ ಮಾತನಾಡಿ, ನಾಯಕ ನಟನಾಗಿ ನ್ಯಾಯ ಒದಗಿಸಿದ್ದೇನೆ ಎಂದರು. ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ಮೈಕೋ ಮಂಜು ಮಾತನಾಡಿ ಒಂದೇ ದಿನದಲ್ಲಿ ನಡೆಯುವ ಕಥೆ ಇದು. ಚಿತ್ರದಲ್ಲಿ ಮೂರು ಸುಂದರ ಹಾಡುಗಳಿವೆ. ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು. ಇದೊಂದು ಹೊಸ ಪ್ರಯತ್ನ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಗತಿ, ಹಂಚಿಕೆದಾರ ವೆಂಕಟಗೌಡ, ನೂತನ್ ಕನ್ನಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.