ಚಿತ್ರದುರ್ಗದ ಮದಕರಿ ನಾಯಕ ವಂಶದ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕುರಿತಾದ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ಐತಿಹಾಸಿಕ ಸಿನಿಮಾ. ಕಳೆದ ವರ್ಷ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಈಗ ಶೂಟಿಂಗ್ ಮುಕ್ತಾಯವಾಗಿದೆ. ಹೆಸರಾಂತ ಕಾದಂಬರಿಕಾರ ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ ಭರಮಣ್ಣ ನಾಯಕ‘ ಎರಡು ಭಾಗಗಳಲ್ಲಿ ತಯಾರಾಗಿ ತೆರೆ ಮೇಲೆ ಬರುತ್ತಿದೆ.
ಚಿತ್ರೀಕರಣ ಮುಗಿಸಿದ ‘ಬಿಚ್ಚುಗತ್ತಿ ಭರಮಣ್ಣ ನಾಯಕ‘ - undefined
ಕನ್ನಡ ಚಿತ್ರರಂಗದಲ್ಲಿ ಚರಿತ್ರೆಯ ಪುಟಗಳನ್ನು ತಿರುವು ಹಾಕುವ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಪೂರಕವೆನ್ನುವಂತೆ ಸಾಕಷ್ಟು ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಕನ್ನಡದಲ್ಲಿ ತಯಾರಾಗಿವೆ. ಅದರಲ್ಲಿ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕೂಡಾ ಒಂದು.
ಚಿತ್ರದುರ್ಗ ಸೀಮೆಯ ಪಾಳೆಗಾರ ಭರಮಣ್ಣ ನಾಯಕನ ಕಥೆಯನ್ನು ಸಿನಿಮಾ ಹೊಂದಿದೆ. 13 ಪಾಳೆಗಾರರ ಪೈಕಿ ಒಬ್ಬರಾದ ಭರಮಣ್ಣ ನಾಯಕ 1675ರಿಂದ 1685 ಅವಧಿಯಲ್ಲಿ ಇದ್ದಂತವರು. ಚಿತ್ರದ ಮೊದಲ ಭಾಗದಲ್ಲಿ ದಳವಾಯಿ ದಂಗೆ ಕುರಿತು ಹೇಳಲಾಗಿದೆ.
ಈ ಸಿನಿಮಾದಲ್ಲಿ ಹರಿಪ್ರಿಯ ಸಿದ್ದಾಂಬೆ ಎಂಬ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಬಹುತೇಕ ವೈವಿಧ್ಯಮಯ ಪಾತ್ರಗಳನ್ನು ಪ್ರೇಕ್ಷಕರು ನೋಡಬಹುದು ಎಂದು ನಿರ್ದೇಶಕ ಹರಿ ಸಂತೋಷ್ ಹೇಳುತ್ತಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಅಡಿ ನಿರ್ಮಾಣ ಆಗಿರುವ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಕಲ್ಯಾಣಿ, ಶಿವರಾಮಣ್ಣ, ರೇಖಾ, ರಮೇಶ್ ಪಂಡಿತ್ ನಟಿಸಿದ್ದಾರೆ. ಎಡ್ವರ್ಡ್ ಕೆನಡಿ ಕಲಾ ನಿರ್ದೇಶನವಿರುವ ಸಿನಿಮಾ ಹಾಡುಗಳಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದಾರೆ.