ಮುಂಬೈ:ಕಳೆದ ಕೆಲ ತಿಂಗಳ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ (B-town actor Aamir Khan) ಹಾಗೂ ಅವರ ಎರಡನೇ ಪತ್ನಿ ಕಿರಣ್ ರಾವ್ (Kiran Rao) ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇದರ ಬೆನ್ನಲ್ಲೇ ಅಮೀರ್ ಖಾನ್ ಮೂರನೇ ಮದುವೆ ಮಾಡಿಕೊಳ್ಳಲಿದ್ದಾರೆಂಬ ವದಂತಿ ಎಲ್ಲೆಡೆ ಹಬ್ಬಲು ಶುರುವಾಗಿತ್ತು. ಆದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಲಾಗಿದೆ.
ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಖಾನ್ ಜೊತೆ ನಟನೆ ಮಾಡಿರುವ ಲಾಲ್ ಸಿಂಗ್ ಚಡ್ಡಾ (Laal Singh Chaddha) ಚಿತ್ರ ರಿಲೀಸ್ ನಂತರ ಅಮೀರ್ ಖಾನ್ ಮೂರನೇ ಮದುವೆ ಮಾಡಿಕೊಳ್ಳಲಿದ್ದಾರೆಂಬ ಮಾತು ಕೇಳಿ ಬಂದಿತ್ತು. ಜೊತೆಗೆ ಶೀಘ್ರವೇ ಇದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆಂಬ ಮಾಹಿತಿ ಕೂಡ ಹಬ್ಬಿತ್ತು. ಅಮೀರ್ ಖಾನ್ ಸಹ ನಟಿಯರೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಖುದ್ದಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅದಕ್ಕೆ ಪೂರ್ಣ ವಿರಾಮ ಇಡಲಾಗಿದ್ದು, ಮದುವೆ ವದಂತಿ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.