ಕನ್ನಡ ಚಿತ್ರರಂಗದ ಯೂತ್ ಐಕಾನ್ ಆಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ನಗು ಮುಖದ ರಾಜಕುಮಾರ ಬದುಕಿದ್ದಾಗ ಹಲವಾರು ಕನಸುಗಳನ್ನು ಕಂಡಿದ್ದರು. ಆದರೆ ವಿಧಿಯಾಟದಿಂದ ಅಪ್ಪು ಇಹಲೋಕ ತ್ಯಜಿಸಿದರು. ಈಗ ಅವರ ಕನಸುಗಳನ್ನ ನನಸು ಮಾಡುವ ಜವಾಬ್ದಾರಿಯನ್ನ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ವಹಿಸಿಕೊಂಡಿದ್ದಾರೆ.
ಪಿಆರ್ಕೆ ಪ್ರೊಡಕ್ಷನ್ ಹೌಸ್, ಗಾಂಧಿನಗರದಲ್ಲಿರುವ ವಜ್ರೇಶ್ವರಿ ಸಂಸ್ಥೆಯ ಕೆಲಸಗಳನ್ನ ಅಶ್ವಿನಿ ಅವರೇ ಮುನ್ನೆಡಸಬೇಕಿದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಇದರ ಜೊತೆಯಲ್ಲಿ, ಪುನೀತ್ ಬದುಕಿದ್ದಾಗ ಕರುನಾಡ ಕುರಿತು ಡಾಕ್ಯುಮೆಂಟರಿ ಮಾಡಿರುವ ಬಗ್ಗೆ ಸುಳಿವು ನೀಡಿದ್ದರು. ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಅಕ್ಟೋಬರ್ 27ರಂದು ಪುನೀತ್ ಟ್ವಟರ್ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು.