ಆಶಿಕಾ ರಂಗನಾಥ್ ಅಭಿನಯದ ಐದು ಚಿತ್ರಗಳು ಬಿಡುಗಡೆಗೆ ಸಿದ್ಧ ಇವೆ. ಅವತಾರ್ ಪುರುಷ 1 ಮತ್ತು 2, 'ರೆಮೋ', 'ಮದಗಜ' ಮತ್ತು 'ಗರುಡ' ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯಷ್ಟೇ ಬಾಕಿ ಇದೆ. ಈ ಮಧ್ಯೆ, ಆಶಿಕಾ ಯಾವುದೇ ಹೊಸ ಕನ್ನಡ ಚಿತ್ರವನ್ನು ಒಪ್ಪಿಕೊಂಡಿಲ್ಲ. ಯಾಕೆ ಒಪ್ಪಿಕೊಂಡಿಲ್ಲ, ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.
ಆಶಿಕಾ ಇದೀಗ ಕಾಲಿವುಡ್ಗೆ ಹೋಗಿದ್ದು, ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ಅವರೇ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ತಮಿಳಿನ ಹಿರಿಯ ನಟಿ ರಾಧಿಕಾ ಮತ್ತು ಅಥರ್ವ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಅವರು, ತಮ್ಮ ಈ ಹೊಸ ಪ್ರಯತ್ನಕ್ಕೆ ಎಲ್ಲರೂ ಹಾರೈಸಿ ಎಂದು ಕೇಳಿಕೊಂಡಿದ್ದಾರೆ.
ಅಂದಹಾಗೆ, ಇದೊಂದು ಗ್ರಾಮೀಣ ಹಿನ್ನೆಲೆಯ ಕ್ರೀಡೆಯ ಕುರಿತಾದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಆಶಿಕಾ ಕಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ನಾಯಕ ಸಹ ಕಬಡ್ಡಿ ಆಟಗಾರನೇ. ಈ ಇಬ್ಬರು ಕಬಡ್ಡಿ ಆಟಗಾರರ ಮಧ್ಯೆ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಶರ್ಕುನಂ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ತಂಜಾವೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ.
ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅಥರ್ವ ಮತ್ತು ಆಶಿಕಾ ಅಲ್ಲದೆ, ರಾಜ್ಕಿರಣ್, ರಾಧಿಕಾ ಶರತ್ ಕುಮಾರ್, ರವಿ ಕಾಳೆ ಮುಂತಾದವರು ನಟಿಸುತ್ತಿದ್ದಾರೆ. ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಇದನ್ನೂ ಓದಿ:'ತಲೈವಿ'ಗೆ ಪಾಸಿಟಿವ್ ರೆಸ್ಪಾನ್ಸ್.. ಪಾರ್ಟ್-2 ಕೂಡ ಬರಲಿದ್ಯಾ!?