ವಿಭಿನ್ನ ಕಥಾಹಂದರ ಹೊಂದಿರುವ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು ಹಾಗೂ ಬ್ಯಾಂಕಾಕ್ನಲ್ಲಿ ಸುಮಾರು 60ದಿನಗಳ ಶೂಟಿಂಗ್ ಮಾಡಲಾಗಿದೆ.
ರಂಗಾಯಣ ರಘು, ರವಿಶಂಕರ್, ತಬಲನಾಣಿ, ಚಿಕ್ಕಣ್ಣ, ತಿಲಕ್ ಮುಂತಾದ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ರ್ಯಾಂಬೋ ಬೆಡಗಿ ಆಶಿಕಾ ರಂಗನಾಥ್ ವಿಶೇಷ ಪಾತ್ರದಲ್ಲಿ ಕಾಣಿಸಿದ್ದಾರೆ. ಈ ಪಾತ್ರಕ್ಕಾಗಿ ಆಶಿಕಾ ರಂಗನಾಥ್ ಕೈಯಲ್ಲಿ ಬಿಯರ್ ಹಿಡಿದು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಯಾರ ಸ್ವಭಾವವನ್ನು ಅವರ ವೇಷಭೂಷಣದಿಂದ ನಿರ್ಧರಿಸಲು ಸಾಧ್ಯವಿಲ್ಲ. ಅವರ ವೇಷಭೂಷಣವೇ ಬೇರೆ. ಸ್ವಭಾವವೇ ಬೇರೆ ಎಂಬುದನ್ನು ನಿರ್ದೇಶಕರು ಆಶಿಕಾ ರಂಗನಾಥ್ ಪಾತ್ರದ ಮೂಲಕ ತೋರಿಸುತ್ತಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿರುವ ದಿಲ್ ವಾಲ, ಶಕ್ತಿ, ರಾಂಬೋ 2 ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕುಮಾರ್ ನಿರ್ದೇಶನದ ಏಳನೇ ಚಿತ್ರ ಕಾಣೆಯಾದವರ ಬಗ್ಗೆ ಪ್ರಕಟಣೆ.
ಅರ್ಜುನ್ ಜನ್ಯ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಶಿವಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದ್ದು, ಏ ಜೆ ಟಾಕೀಸ್ ಹಾಗೂ ಬಿಲ್ವ ಎಂಟರ್ ಟೈನ್‌ಮೆಂಟ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಕೌಟುಂಬಿಕ ಕಥಾಹಂದರದೊಂದಿಗೆ, ಮನೋರಂಜನೆಯ ಮಹಾಪೂರವನ್ನೇ ಹರಿಸಲು ಕಾಣೆಯಾದವರ ಬಗ್ಗೆ ಪ್ರಕಟಣೆ ಮುಂಬರುವ ಮೇ ತಿಂಗಳಲ್ಲಿ ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.